ಬೆಂಗಳೂರು: ದರೋಡೆ ಪ್ರಕರಣದಡಿ ಆರೋಪಿಯೊಬ್ಬನನ್ನು ಹೆಚ್‌ಎಎಲ್ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ನಂತರ ಆತನನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪಾಸಿಟಿವ್ ಎಂದು ವರದಿ ಬಂದಿತ್ತು. ಇದಾದ ಬಳಿಕ ಆರೋಪಿಯ ವಿಚಾರಣೆ ನಡೆಸಿದ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್‌ಗಳಿಗೂ ಸೋಂಕು ತಗುಲಿರುವ ಲಕ್ಷಣ ಗೋಚರಿಸಿದೆ. ಈ ಇಬ್ಬರು ಸೇರಿದಂತೆ ಠಾಣೆಯ ಇತರ ಸಿಬ್ಬಂದಿಗಳನ್ನೂ ಬಳಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಕೊರೊನಾ ಪರೀಕ್ಷೆಯ ವರದಿಯ ಪ್ರಕಾರ ಠಾಣೆಯ 12 ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸದ್ಯ ಇಡೀ ಠಾಣೆಯನ್ನು ಸೀಲ್ ಡೌನ್ ಮಾಡಿ, ಸ್ಯಾನಿಟೈಸ್ ಮಾಡಲಾಗಿದೆ. ಹಾಗೆಯೇ ಆರೋಪಿಯ ಸಂಪರ್ಕದಲ್ಲಿದ್ದ ಸಿಬ್ಬಂದಿಗಳ ಗಂಟಲ ದ್ರವವನ್ನು ಸಂಗ್ರಹಿಸಿ ಅವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಹೆಚ್‌ಎಎಲ್ ಠಾಣೆಯ ಸಿಬ್ಬಂದಿಯೊಬ್ಬರಿಗೆ ಜೂನ್ 27ರಂದು ಕೊರೊನಾ ದೃಢಪಟ್ಟಿತ್ತು. ತದನಂತರ ಕೊರೊನಾ ಪೀಡಿತ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದಲ್ಲದೆ ಈ ಠಾಣೆಯಲ್ಲಿನ ಎಲ್ಲಾ ಆರೋಪಿಗಳನ್ನೂ ಕೂಡಾ ಕೊರೊನಾ ಟೆಸ್ಟ್ಗೆ ಒಳಪಡಿಸಲಾಗಿತ್ತು. ಈ ಪೈಕಿ ಓರ್ವ ಆರೋಪಿಯನ್ನು ಹೊರತುಪಡಿಸಿ ಉಳಿದೆಲ್ಲರಿಗೂ ನೆಗೆಟಿವ್ ಇರುವುದಾಗಿ ವರದಿ ಬಂದಿದೆ ಎಂದು ವೈಟ್ಫೀಲ್ಡ್ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ 80ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.