ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಪೇದೆ ಮನು ಎಂಬುವರು ತಮಗೆ ಹಾಗೂ ಇತರ ಸಿಬ್ಬಂದಿಗೆ ಔರಾದ್ಕರ್ ವರದಿ ಲೋಪದೋಷದಿಂದಾಗಿ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.

ಪೊಲೀಸರ ವೇತನ ಪರಿಷ್ಕರಣೆ ಸಂಬಂಧ ಔರಾದ್ಕರ್ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ವರದಿ ಇತ್ತೀಚೆಗೆ ಜಾರಿಯಾಗಿತ್ತು. ಆದ್ರೆ, ವರದಿಯಲ್ಲಿ ಲೋಪದೋಷಗಳಿವೆ ಎಂದು ಸಾವಿರಾರು ಪೊಲೀಸ್ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಸರ್ಕಾರದ ವಿರುದ್ಧ ಸೇವಾ ಹಿರಿತನವಿರುವ ಪೊಲೀಸ್ ಸಿಬ್ಬಂದಿ ರೊಚ್ಚಿಗೆದ್ದಿದ್ದಾರೆ. ವರದಿಯಲ್ಲಿ ಲೋಪದೋಷವಿದೆಯಾ? ಅಥವಾ ಸರ್ಕಾರದ ಆದೇಶದಲ್ಲಿ ದೋಷಗಳಿವೆಯೇ? ಪೊಲೀಸರ ಸೇವಾ ಹಿರಿತನ ನೋಡದೆ ಮೂಲ ವೇತನ ಪರಿಷ್ಕರಿಸಿದ್ದು ಎಷ್ಟು ಸರಿ? ಆದಷ್ಟು ಬೇಗ ಸರ್ಕಾರ ವರದಿಯ ಲೋಪದೋಷ ಬಗೆಹರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೇವಲ ಭರವಸೆ ಕೊಟ್ಟು ಪೊಲೀಸರ ಮಾನಸಿಕ ಹಾಗೂ ದೈಹಿಕ ಸ್ಥಿತಿಯನ್ನು ಕುಂದಿಸುತ್ತಿರುವ ಬಗ್ಗೆ ಆದಷ್ಟು ಬೇಗ ಗಮನಹರಿಸಿ ಎಂದು ಪೊಲೀಸ್ ಪೇದೆ ಮನು ಪತ್ರದ ಮುಖೇನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.