ಬೆಂಗಳೂರು: ಸಿನಿಮಾ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬರು ಮಾಲ್ ಸೆಕ್ಯುರಿಟಿ ಗಾರ್ಡ್ ಹಾಗೂ ಸಿಬ್ಬಂದಿಯೊಂದಿಗೆ ರಾದ್ಧಾಂತ ನಡೆಸಿದ ಘಟನೆ ಗರುಡಾ ಮಾಲ್ನ ಪಿವಿಆರ್ ಐನಾಕ್ಸ್ ಚಿತ್ರಮಂದಿರದ ಬಳಿ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿನಿಮಾ ಹಾಲ್ ನಲ್ಲಿ ಮರೆತುಹೋಗಿದ್ದ ವ್ಯಾಲೆಟ್ ಹಿಂಪಡೆಯುವ ವಿಚಾರವಾಗಿ ಗಲಾಟೆ ನಡೆದಿದ್ದು, ಸೆಕ್ಯೂರಿಟಿ ಗಾರ್ಡ್ ಹಾಗೂ ಮಾಲ್ ಸಿಬ್ಬಂದಿ ವಿವರಿಸುತ್ತಿದ್ದರೂ ಸಹ ಮಹಿಳೆ ಸಿಬ್ಬಂದಿಯನ್ನು ನಿಂದಿಸಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಗಿದ್ದೇನು?: ಹಿಂದಿಯ ಅನಿಮಲ್ ಸಿನಿಮಾ ವೀಕ್ಷಿಸಲು ನಿನ್ನೆ 10:30ರ ಸುಮಾರಿಗೆ ಪಿವಿಆರ್ ಐನಾಕ್ಸ್ ಚಿತ್ರಮಂದಿರಕ್ಕೆ ಬಂದಿದ್ದ ಮಹಿಳೆ ತಮ್ಮ ವ್ಯಾಲೆಟ್ ಅನ್ನು ಸೀಟಿನಲ್ಲಿ ಮರೆತುಹೋಗಿದ್ದರು. ಸ್ವಚ್ಛತಾ ಕಾರ್ಯದ ಸಂದರ್ಭದಲ್ಲಿ ಗಮನಿಸಿದ್ದ ಹೌಸ್ ಕೀಪಿಂಗ್ ಸಿಬ್ಬಂದಿ ವ್ಯಾಲೆಟ್ ಅನ್ನು ಸೆಕ್ಯುರಿಟಿಗೆ ಒಪ್ಪಿಸಿದ್ದರು. ರಾತ್ರಿ 3 ಗಂಟೆಯ ಸುಮಾರಿಗೆ ಮಾಲ್ ಬಳಿ ಬಂದಿದ್ದ ಅದೇ ಮಹಿಳೆ ವ್ಯಾಲೆಟ್ ಕುರಿತು ವಿಚಾರಿಸಿದ್ದರು. ಈ ವೇಳೆ ಸೆಕ್ಯುರಿಟಿ ಗಾರ್ಡ್ ನಿಯಮಾನುಸಾರ ನಿಮ್ಮ ಐಡೆಂಟಿಟಿ ಮಾಹಿತಿ ನೀಡಿ ಎಂದಿದ್ದರು. ಇದರಿಂದ ಕೋಪಗೊಂಡ ಮಹಿಳೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತ ವ್ಯಾಲೆಟ್ ಕಿತ್ತುಕೊಂಡು ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾರೆ.
ಮಾಲ್ ಸಿಬ್ಬಂದಿ ವಿವರಿಸುವ ಪ್ರಯತ್ನ ಮಾಡಿದ್ದರಾದರೂ ಮಾತು ಕೇಳದೇ ಹಲ್ಲೆ ಮುಂದುವರೆಸಿದ್ದಲ್ಲದೇ ತಾವೇ ಕರೆ ಮಾಡಿ ಪೊಲೀಸರನ್ನ ಕರೆಸಿ ತನ್ನ ವ್ಯಾಲೆಟ್ನಲ್ಲಿ ಎಂಟು ಸಾವಿರ ಕಳ್ಳತನವಾಗಿದೆ ಎಂದು ದೂರಿದ್ದಾರೆ. ಆದರೆ ಸಿಸಿಟಿವಿ ಕ್ಯಾಮರಾದ ಸಮ್ಮುಖದಲ್ಲಿ ಅದರಲ್ಲಿದ್ದ 21,020 ರೂ. ಹಣ ಮತ್ತಿತರ ವಸ್ತುಗಳನ್ನ ಪರಿಶೀಲಿಸಲಾಗಿದ್ದು, ಯಾವುದೇ ಕಳ್ಳತನವಾಗಿಲ್ಲ. ಅದೇ ಮಹಿಳೆ ಅನೇಕ ಬಾರಿ ಬಂದು ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ ಎಂದು ಚಿತ್ರಮಂದಿರದ ಸಿಬ್ಬಂದಿ ದೂರು ನೀಡಿದ್ದಾರೆ. ಘಟನೆಯ ಕುರಿತು ಅಶೋಕ ನಗರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಿಕೊಳ್ಳಲಾಗಿದ್ದು, ಮಹಿಳೆ ಹಾಗೂ ಪಿವಿಆರ್ ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹರಾಜಿನಲ್ಲಿ ಕಡಿಮೆ ಬೆಲೆಗೆ ವಾಹನಗಳನ್ನು ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ ನಕಲಿ ಪೊಲೀಸ್ ಬಂಧನ