ಬೆಂಗಳೂರು: ರಾಮ ಮಂದಿರ ನಿರ್ಮಾಣ ಮಾಡಲು ಜನರೇ ಚಂದಾ ನೀಡುವಾಗ, ಅದರ ಬಗ್ಗೆ ಅವರಿಗ್ಯಾಕೆ ಚಿಂತೆ. ಅವರಿಗೆ ಚಂದಾ ಸಿಗ್ತಿಲ್ಲ ಅಂತ ಬೇಸರ ಇರಬೇಕು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ನಡೆಸಿದರು.
ರಾಮ ಮಂದಿರ ನಿರ್ಮಾಣ ದೇಣಿಗೆ ನೀಡದವರ ಮನೆ ಗುರುತು ಹಾಕಿರುವ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮನಸ್ಥಿತಿ ಏನು? ಇಂತಹ ಮನಸ್ಥಿತಿ ಯಾಕೆ ತೋರಿಸುತ್ತಿದ್ದಾರೆ? ಅವರ ಹೇಳಿಕೆ ಹಾಸ್ಯಾಸ್ಪದದಿಂದ ಕೂಡಿದೆ. ಚಂದಾ ಹಣ ಸಿಗಲ್ಲ ಎಂಬ ಯೋಚನೆ ಕುಮಾರಸ್ವಾಮಿಗೆ ಇರಬೇಕು ಅಷ್ಟೇ ಎಂದರು.
ಸಿಎಂ ಸ್ಥಾನ ಬದಲಾವಣೆ ಕುರಿತು ಪದೇ ಪದೆ ಹೇಳಿಕೆ ನೀಡುವ ಮೂಲಕ ಪಕ್ಷದ ನಾಯಕರಲ್ಲಿ ಒಮ್ಮತವಿಲ್ಲ ಎಂಬುದನ್ನು ಯತ್ನಾಳ್ ತೋರಿಸಿದ್ದರು. ಇದೇ ಹಿನ್ನೆಲೆ ಅವರಿಗೆ ಪಕ್ಷದ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ಈ ಬೆಳವಣಿಗೆ ನಡುವಲ್ಲಿ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ, ಪಕ್ಷ ಬಲಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಸಮರ್ಥನೆ ನೀಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್ನಲ್ಲಿ ನಾಯಕತ್ವ ಫೇಲ್ ಆಗಿದೆ. ರಾಜ್ಯ ಕಾಂಗ್ರೆಸ್ ಕೂಡ ಬಣವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ. ರಾಹುಲ್ ಗಾಂಧಿ ನಾಯಕತ್ವ ಸಂಪೂರ್ಣ ವಿಫಲಗೊಂಡಿದೆ. ಪಾರ್ಲಿಮೆಂಟ್ನಲ್ಲಿ ರಾಹುಲ್ ಗಾಂಧಿ ಮಾತುಗಳನ್ನು ಗಮನಿಸಿದರೆ ಕೇಂದ್ರ ನಾಯಕತ್ವ ಗೊಂದಲದಲ್ಲಿದೆ. ಪಕ್ಷ ಸಂಘಟನೆಗೆ ಶ್ರಮವೂ ಇಲ್ಲ ಎಂಬುದು ಸಾಬೀತಾಗುತ್ತದೆ ಎಂದರು.