ಆನೇಕಲ್ : ಇಡೀ ಆನೇಕಲ್ ಜನತೆಯನ್ನು ಬೆಚ್ಚಿ ಬೀಳಿಸಿದ್ದ ಎರಡು ನಿಗೂಢ ಕೊಲೆಯನ್ನು ಇದೀಗ ಹೆಬ್ಬಗೋಡಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆ ಮತ್ತಿನ ಗಮ್ಮತ್ತಿನಲ್ಲಿ 'ಮಚ್ಚಾ' ಎಂಬ ಪದವೇ ಇಬ್ಬರ ಕೊಲೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ
ಕಳೆದ ನಾಲ್ಕೈದು ದಿನಗಳ ಹಿಂದೆ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರದ ನೀಲಗಿರಿ ತೋಪಿನಲ್ಲಿ ಪಕ್ಕದ ಸಂಪಿಗೆ ನಗರದ ನಿವಾಸಿ ರವಿಕುಮಾರ್ ಹಾಗು ಕೋಲ್ಕತಾ ಮೂಲದ ಚಂದನ್ ದಾಸ್ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಈ ಘಟನೆ ತಾಲೂಕಿನಾದ್ಯಂತ ಸಂಚಲನ ಮೂಡಿಸಿತ್ತು.
ಇನ್ನು ಹೆಬ್ಬಗೋಡಿಯ ಪೊಲೀಸ್ ಅಧಿಕಾರಿ ಗೌತಂ ತಂಡ ಕೊಲೆಯಾಗಿದ್ದ ಶವಗಳ ನಡುವಿನ ಮದ್ಯದ ಬಾಟಲಿಗಳ ಮೂಲಕ ಕೊಲೆಗೆ ಕಾರಣ ಪತ್ತೆಮಾಡಿದೆ. ಇವರು ಮದ್ಯವನ್ನು ತಂದಿದ್ದ ಬಾರ್ನ್ನು ಮೊದಲು ಪತ್ತೆ ಮಾಡಿದ ಪೊಲೀಸರು ಅಲ್ಲಿನ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿ ತನಿಖೆ ಚುರುಕುಗೊಳಿಸಿದ್ದರು.
ಸಂಪಿಗೆ ನಗರದ ರವಿಕುಮಾರ್- ಚಂದನ್ ದಾಸ್ ಸ್ನೇಹಿತರಾಗಿದ್ದು ಇವರನ್ನು ಕೊಲೆ ಮಾಡಿದ ಆರೋಪಿಗಳಾದ ಅಸ್ಸೋಂ ನ ಅಬ್ಸುಲ್ ಕರೀಂ(22) ಮತ್ತು ದಾರುಲ್ ಆಲಂ(23) ರನ್ನು ಪೊಲೀಸರು ತಮ್ಮ ಬಲೆಗೆ ಬೀಳಿಸಿಕೊಂಡಿದ್ದಾರೆ. ಈ ಆರೋಪಿಗಳು ಕೊಲೆ ಮಾಡಿ ವಿಮಾನದ ಮೂಲಕ ಅಸ್ಸೋಂ ತಲುಪುವ ಮುನ್ನವೇ ಸಿಸಿ ಕ್ಯಾಮೆರಾ ದೃಶ್ಯಗಳು ಪೊಲೀಸರಿಗೆ ಆರೋಪಿಗಳ ಸುಳಿವು ನೀಡಿದ್ದವು.
ಕೊಲೆ ನಡೆದಿದ್ದು ಯಾಕೆ?:
ರವಿಕುಮಾರ್, ಚಂದನ್ ದಾಸ್, ಅಬ್ಸುಲ್ ಕರೀಂ ಮತ್ತು ದಾರುಲ್ ಆಲಂ ಒಟ್ಟಾಗಿ ಕುಡಿಯಲು ಮುಂದಾಗಿದ್ದಾರೆ. ಆ ವೇಳೆ ಮತ್ತೇ ಮದ್ಯ ತರಲು ಅಬ್ಸುಲ್ ಕರೀಂನನ್ನು ಬಾರ್ಗೆ ಕಳುಹಿಸಿದ್ದಾರೆ. ಬಾರ್ನಿಂದ ಎಣ್ಣೆ ತಂದ ಕರೀಂ, ರವಿಕುಮಾರ್ ಬಳಿ ಬಂದು 'ತಗೋ ಮಚ್ಚಾ' ಎಂದಿದ್ದಾನೆ. ಹೀಗಂದಿದ್ದೇ ತಡ ಕರೀಂ ಮೇಲೆ ರವಿಕುಮಾರ್ ಮುಗಿಬಿದ್ದಿದ್ದಾನೆ.
ಇರುವ ನಾಲ್ವರಲ್ಲಿ ದಾಸ್ ರವಿಗೆ ಸಾಥ್ ನೀಡಿದ್ರೆ, ಆಲಂ ಕರೀಂಗೆ ಸಾಥ್ ನೀಡಿ ರವಿ ಮತ್ತು ದಾಸ್ ನನ್ನ ಸ್ಥಳದಲ್ಲೇ ಹತ್ಯೆ ಮಾಡಿ ಕರೀಂ ಮತ್ತು ಆಲಂ ಪರಾರಿಯಾಗಿದ್ದಾರೆ.