ಬೆಂಗಳೂರು : ಕನ್ನಡವನ್ನು ಭಾರತದ ಕೊಳಕು ಭಾಷೆ ಎಂದು ತೋರಿಸಿದ್ದ ಗೂಗಲ್ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕ್ಕದ್ದಮೆ ಅರ್ಜಿಯನ್ನು ಗೂಗಲ್ ಇಂಡಿಯಾ ಕ್ಷಮೆಯಾಚಿಸಿದ ಬಳಿಕ ಅರ್ಜಿದಾರರು ಹಿಂಪಡೆದಿದ್ದಾರೆ.
ಗೂಗಲ್ ಸರ್ಚ್ ವೇಳೆ ಭಾರತದ ಕೆಟ್ಟ ಭಾಷೆ ಕನ್ನಡ ಎಂದು ತೋರಿಸಿದ್ದರಿಂದ ಭಾಷೆಯ ಘನತೆಗೆ ಚ್ಯುತಿ ಉಂಟಾಗಿದೆ ಎಂದು ಆ್ಯಂಟಿ ಕರಪ್ಷನ್ ಕೌನ್ಸಿಲ್ ಆಫ್ ಇಂಡಿಯಾ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ವಿಚಾರಣೆ ನಡೆಸಿದ ಪೀಠ, ಭಾಷೆಯ ಘನತೆಗೆ ಚ್ಯುತಿ ತರುವ ಯಾವುದೇ ಉದ್ದೇಶ ಗೂಗಲ್ಗೆ ಇಲ್ಲ. ಆಗಿರುವ ಪ್ರಮಾದಕ್ಕೆ ಜೂನ್ 3ರಂದು ಗೂಗಲ್ ತನ್ನ ಟ್ವಿಟರ್ ಮೂಲಕ ಕ್ಷಮೆ ಯಾಚಿಸಿದೆ.
ಜತೆಗೆ ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆಂದು ಗೂಗಲ್ ಭರವಸೆ ನೀಡಿದೆ ಎಂದು ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ತಮ್ಮ ಅರ್ಜಿ ಹಿಂಪಡೆಯಲು ಒಪ್ಪಿದ್ದರಿಂದ ಪೀಠ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿತು.
ಗೂಗಲ್ ಸರ್ಚ್ ವೇಳೆ ಕನ್ನಡ ಭಾರತದ ಕೆಟ್ಟ ಭಾಷೆ ಎಂದು ತೋರಿಸಿದ್ದನ್ನು ಆಕ್ಷೇಪಿಸಿ, ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಭಾಷೆಯ ಘನತೆಗೆ ಚ್ಯುತಿ ತಂದ ಗೂಗಲ್ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಬೇಕು. ಅದಕ್ಕೂ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಸರಲ್ಲಿ 10 ಕೋಟಿ ಠೇವಣಿ ಇಡಬೇಕು ಎಂದು ಅರ್ಜಿದಾರರು ಕೋರಿದ್ದರು.