ಬೆಂಗಳೂರು: ಕೋವಿಡ್ ನಿಯಂತ್ರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಇಂದು ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಕಂದಾಯ ಸಚಿವ ಆರ್ ಅಶೋಕ್ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ಕಂದಾಯ ಸಚಿವ ಆರ್.ಅಶೋಕ್ ಸಭೆ ನಡೆಸಿ ಹಲವು ತೀರ್ಮಾನಗಳನ್ನು ಕೈಗೊಂಡರು. ಆ.15ರ ಬಳಿಕ ಹಲವು ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಈ ಬಗ್ಗೆ ಮಾತನಾಡಿದ ಸಚಿವರು, ಈ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರಲಿವೆ. ದೇವಸ್ಥಾನಗಳಿಗೆ ಹೆಚ್ಚು ಜನ ಬರುವ ಸಾಧ್ಯತೆ ಇದೆ. ಹೀಗಾಗಿ ದೇವಸ್ಥಾನಗಳಿಗೆ ನಿರ್ಬಂಧ ಮಾಡುವ ಬಗ್ಗೆ ಹೆಚ್ಚಿನ ಗಮನ ಕೊಡಲಾಗುವುದು. ನಿರಂತರ ಹಬ್ಬ ಬರುವುದರಿಂದ ಮುಂಜಾಗ್ರತ ಕ್ರಮ ಕೈಗೊಳ್ಳಬೇಕಿದೆ. ಈ ತಿಂಗಳು ಪೂರ್ತಿ ನಿಯಮ ತರುವ ಬಗ್ಗೆ ಆಡಳಿತ ಮಂಡಳಿಯ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ಅಪಾರ್ಟ್ಮೆಂಟ್ ಸಾಮಾನ್ಯ ಪ್ರದೇಶಗಳು ಬಂದ್ :
ಕೋವಿಡ್ ಹೆಚ್ಚಾಗಿ ಅಪಾರ್ಟ್ಮೆಂಟ್ಗಳಲ್ಲೇ ಕಂಡುಬರುತ್ತಿರುವುದರಿಂದ ಕೋವಿಡ್ ಸೋಂಕು ಕಂಡುಬರುವ ಅಪಾರ್ಟ್ಮೆಂಟ್ಗಳ ಜಿಮ್, ಸ್ವಿಮ್ಮಿಂಗ್ ಪೂಲ್ ಬಂದ್ ಮಾಡಿಸಲಾಗುವುದು. ಮಾರ್ಷಲ್ಸ್ ಕೂಡಾ ಭೇಟಿ ನೀಡಿ ಪರಿಶೀಲಿಸಬಹುದಾಗಿದ್ದು, ಅವರನ್ನು ಯಾರೂ ತಡೆಯುವಂತಿಲ್ಲ. ಜೊತೆಗೆ ಕೊರೊನಾ ಸೋಂಕು ಕಂಡು ಬಂದವರ ಆರೋಗ್ಯ ಪರಿಶೀಲಿಸಬೇಕು. ಆ ಒಂದು ಫ್ಲೋರ್ ಅನ್ನು ಸೀಲ್ಡೌನ್ ಮಾಡಲಾಗುವುದು ಎಂದರು.
ಮನೆಬಾಗಿಲಿಗೆ ಕಾರ್ಪೊರೇಷನ್ ವೈದ್ಯರು:
ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ನಗರದ ಪ್ರತಿ ಮನೆಗೂ ಭೇಟಿ ನೀಡಲು ವೈದ್ಯಾಧಿಕಾರಿಗಳ 108 ತಂಡ ಆ.16 ರಿಂದ ಕೆಲಸ ಆರಂಭಿಸಲಿದೆ. ಮನೆ ಬಾಗಿಲಿಗೆ ಕಾರ್ಪೊರೇಷನ್ ವೈದ್ಯರು ಎಂಬ ಯೋಜನೆಯಡಿ ಪ್ರತಿ ಮನೆಗೂ ಹೋಗಿ ಮನೆಯ ಎಲ್ಲಾ ಸದಸ್ಯರ ಆರೋಗ್ಯ ಪರಿಸ್ಥಿತಿಯ ಚೆಕ್ ಲಿಸ್ಟ್ ಮಾಡಿಕೊಳ್ಳಬೇಕು. ಲಸಿಕೆ ಮಾಹಿತಿಯನ್ನೂ ಪಡೆದು ಎಲ್ಲವನ್ನೂ ಮೊಬೈಲ್ನಲ್ಲಿ ಅಪ್ಲೋಡ್ ಮಾಡುವ ಕೆಲಸ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಓದಿ: ಜಾರಿ ನಿರ್ದೇಶನಾಲಯ ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ: ಶಾಸಕ ಜಮೀರ್ ಅಹ್ಮದ್
ಕೋವಿಡ್ ಪಾಸಿಟಿವ್ ಎಂದು ಗೊತ್ತಾದ ಆರು ಗಂಟೆಯೊಳಗೆ ವೈದ್ಯರ ತಂಡ ಭೇಟಿ ನೀಡಲಿದೆ. ಇದಲ್ಲದೆ ಕೋವಿಡ್ ಇದ್ದರೂ ಇರದಿದ್ದರೂ, ವೈದ್ಯರ ತಂಡ ಮನೆ ಬಾಗಿಲಿಗೆ ಭೇಟಿ ನೀಡಲಿದೆ. ಪ್ರತಿ ಮನೆಗೂ ಒಂದು ಕ್ಷೇತ್ರದ ಎರಡು ವಾರ್ಡ್ಗಳಲ್ಲಿ ಪೈಲೆಟ್ ಯೋಜನೆ ಜಾರಿಯಾಗಲಿದೆ. ಇದರಿಂದ ನಗರದ ಜನರ ಪೂರ್ಣ ಚಿತ್ರಣ ಸಿಗಲಿದೆ. ರೋಗಿಗಳ ರಕ್ಷಣೆ, ರೋಗ ಬಾರದಂತೆ ತಡೆಗಟ್ಟಲು, ವ್ಯಾಕ್ಸಿನೇಷನ್ ಪಡೆಯಲು ಮನೆಬಾಗಿಲಿಗೆ ಕಾರ್ಪೊರೇಷನ್ ವೈದ್ಯರು ಎಂಬ ಮೂಲಕ ನಡೆಯಲಿದೆ. ಸರ್ಕಾರದ ನಿರ್ದೇಶನದ ಪ್ರಕಾರ ವಾರ್ಡ್ಗೆ ಒಬ್ಬರಂತೆ, 198 ವೈದ್ಯರನ್ನು 60 ಸಾವಿರ ಸಂಬಳ ನೀಡಿ ಗುತ್ತಿಗೆಗೆ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದರು.
ಕೋವಿಡ್ಗಾಗಿಯೇ ವೈದ್ಯರು ಮೀಸಲು:
ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಇಬ್ಬರು ವೈದ್ಯರು ಇರಲಿದ್ದಾರೆ. ಕೋವಿಡ್ ಸೋಂಕಿತರಿಗೆ ಕೊಟ್ಟ ಕಿಟ್ನಿಂದ ಏನಾದರೂ ಅಡ್ಡ ಪರಿಣಾಮಗಳಾದರೆ, ಬೇರೆ ಮೆಡಿಸಿನ್ ಸಲಹೆ ನೀಡಲು ಪ್ರತಿ ಕ್ಷೇತ್ರದಲ್ಲಿ ಇಬ್ಬರು ಹೆಚ್ಚುವರಿ ವೈದ್ಯರು ಕೋವಿಡ್ಗಾಗಿಯೇ ಮೀಸಲಾಗಿ ಇರಲಿದ್ದಾರೆ. ಇವರ ಹೆಸರು, ಸಂಪರ್ಕ ಸಂಖ್ಯೆಯನ್ನು ಕಿಟ್ ನಲ್ಲಿಯೇ ನಮೂದಿಸಿ ಇಡಲಾಗುತ್ತದೆ ಎಂದು ತಿಳಿಸಿದರು.
ನಗರದಲ್ಲಿ ಕಳೆದ 40 ದಿನಗಳಲ್ಲಿ 400 ಪ್ರಕರಣ ಕಂಡು ಬರುತ್ತಿದೆ. ಬೊಮ್ಮನಹಳ್ಳಿ, ಯಲಹಂಕ, ಮಹದೇವಪುರದಲ್ಲಿ ಹೆಚ್ಚು ಕೇಸ್ಗಳು ಕಂಡುಬರುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರು 189 ಇದ್ದು, ಖಾಸಗಿ ಆಸ್ಪತ್ರೆಯಲ್ಲಿ 462 ರಷ್ಟಿದ್ದಾರೆ. 88 ಮಂದಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಸಿಕೆ ವಿತರಣೆಯಾಗಿರುವ ಪ್ರಮಾಣ:
- ಮೊದಲ ಡೋಸ್ -60,54,264 -67%
- ಎರಡನೇ ಡೋಸ್ - 17,07,678- 19%
- ಬೆಂಗಳೂರು ನಗರ ಮೊದಲ ಡೋಸ್-9,78,671 - 92%
- ಎರಡನೇ ಡೋಸ್ - 2,13,976- 22%