ಬೆಂಗಳೂರು: ನಾನು ಬಿಜೆಪಿಗೆ ಬರುತ್ತಿದ್ದೇನೆ. ಮೂರನೇ ಬಾರಿ ಮೈಸೂರು - ಚಾಮರಾಜನಗರ ಸ್ಥಳೀಯ ಸಂಸ್ಥೆಯಿಂದ ಮತ್ತೆ ಗೆದ್ದು ಬರುವೆ ಎಂದು ಹೇಳುವ ಮೂಲಕ ಬಿಜೆಪಿ ಸೇರುವುದಾಗಿ ಜೆಡಿಎಸ್ ವಿಧಾನ ಪರಿಷತ್ತಿನ ಸದಸ್ಯ ಸಂದೇಶ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಕಚೇರಿಗೆ ಭೇಟಿ ನೀಡಿದ ವೇಳೆ ಅಲ್ಲಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 5ರ ತನಕ ಮಾತ್ರ ನಾನು ಜೆಡಿಎಸ್ ಸದಸ್ಯನಾಗಿರುತ್ತೇನೆ. ಅದಾದ ಬಳಿಕ ನಾನು ಜೆಡಿಎಸ್ ಸದಸ್ಯನಾಗಿರುವುದಿಲ್ಲ. ಕಳೆದ ಒಂದೂವರೆ ವರ್ಷದಿಂದ ನಾನು ಜೆಡಿಎಸ್ನಿಂದ ದೂರವೇ ಇದ್ದೇನೆ. ಜೆಡಿಎಸ್ನ ಯಾರ ಸಂಪರ್ಕದಲ್ಲಿಯೂ ಇಲ್ಲ. ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹಾಗೂ ರಾಜ್ಯಾಧ್ಯಕ್ಷರ ಭೇಟಿ ಮಾಡಬೇಕಿತ್ತು.
ಆದರೆ, ಅವರಿಬ್ಬರೂ ಸಿಗಲಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಿ ಪಕ್ಷ ಸೇರಿವೆ ಎಂದು ಬಹಿರಂಗವಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಬರೋದು ಖಚಿತ. ಆದರೆ, ಅದಕ್ಕೂ ಮುನ್ನ ಸಿಎಂ ಬೊಮ್ಮಾಯಿ ಹಾಗೂ ಅಧ್ಯಕ್ಷ ಕಟೀಲ್ ಅವರು ಇದಕ್ಕೆ ಮನಸ್ಸು ಮಾಡಬೇಕು ಎಂದರು.
ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರು ಬೇಕು:
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಅವರ ಹೆಸರನ್ನು ಇಡಬೇಕು ಎಂಬ ಅಭಿಯಾನಕ್ಕೆ ಪ್ರತಿಕ್ರಿಯೆ ನೀಡಿದ ನಾಗರಾಜ್, ಚಲನಚಿತ್ರ ರಂಗದ ವ್ಯಕ್ತಿಯಾಗಿ ಹಾಗೂ ನಿರ್ಮಾಪಕನಾಗಿ ನಮ್ಮ ಮೆಟ್ರೋ ನಿಲ್ದಾಣಕ್ಕೆ ಚಂದನವನದ ದಂತಕಥೆ ಶಂಕರ್ ನಾಗ್ ಹೆಸರು ಇಡುವುದು ಸೂಕ್ತ ಎಂದರು.