ಬೆಂಗಳೂರು: ಆನಂದ್ ಸಿಂಗ್ ಜಿಂದಾಲ್ ವಿಚಾರವಾಗಿ ರಾಜೀನಾಮೆ ಕೊಟ್ಟಿದ್ದರೆ ಅವರು ಕೂಡಲೇ ರಾಜೀನಾಮೆ ವಾಪಸ್ ಪಡೆಯಬೇಕು ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಆಗ್ರಹಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಜಿಂದಾಲ್ ವಿಚಾರಕ್ಕೆ ರಾಜೀನಾಮೆ ಕೊಟ್ಟಿದ್ದರೆ ಅದು ಆತುರದ ನಿರ್ಧಾರ ಮಾಡಿದಂತೆ ಆಗುತ್ತದೆ. ಅವರು ತಪ್ಪು ಕಲ್ಪನೆಯಿಂದ ರಾಜೀನಾಮೆ ಕೊಟ್ಟಿದ್ದರೆ ವಾಪಸ್ ಪಡೆಯಬೇಕು. ಸಂಪುಟ ಉಪ ಸಮಿತಿ ವರದಿ ಬರುವವರೆಗೂ ಆನಂದ್ ಸಿಂಗ್ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಅಭಿಪ್ರಾಯಪಟ್ಟರು.
ಜಿಂದಾಲ್ ಸಂಸ್ಥೆಗೆ ಭೂಮಿ ಕೊಡಲು ಸಂಪುಟ ಅನುಮೋದನೆ ನೀಡಿತ್ತು. ಸಚಿವ ಸಂಪುಟಕ್ಕೂ ಮೊದಲೇ ನಾನು ಭೂಮಿ ನೀಡಬಾರದು ಎಂದು ಪತ್ರ ಬರೆದಿದ್ದೆ. ಮತ್ತೆ ಜಾರ್ಜ್ ಅವರಿಗೂ ನಾನು ಪತ್ರ ಬರೆದಿದ್ದೆ. ಆ ಬಳಿಕ ಸಂಪುಟ ಉಪ ಸಮಿತಿಗೆ ನೀಡಲಾಗಿದೆ. ಉಪ ಸಮಿತಿ ಏನು ವರದಿ ನೀಡುತ್ತೋ ನೋಡೋಣ. ವರದಿ ಕೊಡೋವರೆಗೂ ಯಾರು ಆತಂಕ ಪಡೋ ಅಗತ್ಯ ಇಲ್ಲ ಎಂದರು.
ರಾಜೀನಾಮೆ ಕೊಟ್ಟು ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡುವುದು ಸರಿಯಲ್ಲ. ಅವರು ಕೂಡಲೇ ರಾಜೀನಾಮೆ ವಾಪಸ್ ಪಡೆಯಬೇಕು. ಉಪ ಸಮಿತಿ ವರದಿ ಬಂದ ನಂತರ ಈ ಬಗ್ಗೆ ಆನಂದ್ ಸಿಂಗ್ ನಿರ್ಧಾರ ಮಾಡಲಿ. ಉಪ ಸಮಿತಿ ವರದಿ ಬಂದ ನಂತರ ನಾನು ಮಾತನಾಡುತ್ತೇನೆ. ಉಪ ಸಮಿತಿಯ ಮೇಲೆ ನನಗೆ ವಿಶ್ವಾಸ ಇದೆ ಎಂದರು.
ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿಂದೆ ಸರ್ಕಾರ ಬೀಳಿಸಬೇಕು ಅನ್ನೋರ ಕೈವಾಡ ಇದೆ. ರಾಜೀನಾಮೆ ಕೊಡಿಸುವುದರ ಹಿಂದೆ ಬಿಜೆಪಿ ಅವರ ಕೈವಾಡ ಇದೆ. ಬಿಜೆಪಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಹೊರಟಿದೆ ಎಂದು ಹೆಚ್.ಕೆ.ಪಾಟೀಲ್ ಬಿಜೆಪಿ ವಿರುದ್ಧ ಕಿಡಿಕಾರಿದರು.