ಬೆಂಗಳೂರು: ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯಾದ್ಯಂತ 117 ಅಂಗಡಿಗಳ ಲೈಸನ್ಸ್ ರದ್ದು ಮಾಡಲಾಗಿದೆ. ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಿರುವ ಪ್ರಕರಣಗಳು ಕಂಡು ಬಂದರೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಈಗಾಗಲೇ 3,90,390 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಮಾಡಿದ್ದೇವೆ. 2007 ರಲ್ಲಿ ಶೇ. 98 ರಷ್ಟು ಬಿತ್ತನೆಯಾಗಿತ್ತು. ಈ ಬಾರಿ ಶೇ. 101 ರಷ್ಟು ಬಿತ್ತನೆಯಾಗಿದೆ. 1,85,426 ಮೆಟ್ರಿಕ್ ಟನ್ ಯೂರಿಯಾ ಹೆಚ್ಚಿಗೆ ಸರಬರಾಜು ಮಾಡಿದ್ದೇವೆ. ಇನ್ನೂ 30 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಬಂದಿದ್ದು, ಅದು ಮಂಗಳೂರಿನಲ್ಲಿ ಇದೆ ಎಂದು ಹೇಳಿದರು.
75 ಲಕ್ಷ ರೈತರ ಬೆಳೆ ಸಮೀಕ್ಷೆ:
ಹಿಂದೆ ಮೂರು ಸಾವಿರ ರೈತರು ಬೆಳೆ ಸಮೀಕ್ಷೆ ನಡೆಸಿದರು. ಆದರೆ ಈಗ 75 ಲಕ್ಷ ರೈತರು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಈ ತಿಂಗಳ 23 ರವರೆಗೆ ಕಾಲಾವಕಾಶವಿದ್ದು, ಎಲ್ಲಾ ರೈತರು ಬೆಳೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಕಳುಹಿಸಿ ಕೊಡಬೇಕು. ಇಲ್ಲದಿದ್ದರೆ ಸರ್ಕಾರದಿಂದ ಸಿಗುವ ಸವಲತ್ತು ಸಿಗುವುದಿಲ್ಲ. ಹಾಗಾಗಿ, ರೈತರು ಬೆಳೆ ಸಮೀಕ್ಷೆ ನಡೆಸುವಂತೆ ಮನವಿ ಮಾಡಿದರು.
ರೈತರು ಮುಂದಿನ ವರ್ಷದಿಂದ ತಮ್ಮ ಬೆಳೆಯ ಸಮೀಕ್ಷೆಯನ್ನು ತಾವೇ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ವರ್ಷದಲ್ಲಿ ಬೆಳೆ ಸಮೀಕ್ಷೆಗೆ ಪ್ರಾಯೋಗಿಕವಾಗಿ ಕೆಲಸ ಮಾಡಲಾಗಿದೆ. ಕೆಲವೆಡೆ ತಂತ್ರಜ್ಞಾನದಿಂದ ಮಳೆಯಿಂದ ಸಮೀಕ್ಷೆಗೆ ತೊಂದರೆಯಾಗಬಹುದು ಅಷ್ಟೇ, ಆದರೆ ಪ್ರಾಯೋಗಿಕತೆ ಯಶಸ್ವಿಯಾಗಿತ್ತು. ಇದೆ ಬೆಳೆ ಸಮೀಕ್ಷೆಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಲೇಬೇಕು ಸರ್ಕಾರದ ಸೌಲಭ್ಯಗಳಿಗೆ ರೈತರು ತಪ್ಪದೆ ಬಳಸಿ ಬೆಳೆ ಸಮೀಕ್ಷೆ ತಪ್ಪದೆ ಮಾಡಬೇಕು ಅಧಿಕಾರಿಗಳು ಇನ್ನಷ್ಟು ಹೆಚ್ಚು ಶ್ರಮ ಮತ್ತು ಆಸಕ್ತಿವಹಿಸಿ ಬೆಳೆ ಸಮೀಕ್ಷೆ ಮಾಡಿಸಬೇಕು ಎಂದು ಸಚಿವರು ಕರೆ ನೀಡಿದರು.