ನೆಲಮಂಗಲ: ಚಿಲ್ಲರೆ ಅಂಗಡಿಯಲ್ಲಿ ಕುಳಿತ್ತಿದ್ದ ಅಜ್ಜಿಯ ಬಳಿಗೆ ಗ್ರಾಹಕನ ಸೋಗಿನಲ್ಲಿ ಬಂದ ಚೋರನೊಬ್ಬ ಅಜ್ಜಿಯನ್ನ ಯಾಮಾರಿಸಿ ಸರ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದಲ್ಲಿ ಘಟನೆ ನಡೆದಿದ್ದು, ರಾಜಮ್ಮ(78) ಚಿನ್ನದ ಸರ ಕಳೆದುಕೊಂಡ ವೃದ್ದೆ. ಅಜ್ಜಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರಕ್ಕೆ ಕುತ್ತಿದ್ದ ವೇಳೆ ಗ್ರಾಹನಕ ಸೋಗಿನಲ್ಲಿ ಬಂದ ಚೋರ ಅಜ್ಜಿಯ ಕೊರಳಲ್ಲಿದ್ದ ಸರವನ್ನು ನೋಡಿದ್ದಾನೆ. ಅನಂತರ ಅಜ್ಜಿಯೊಂದಿಗೆ ಮಾತನಾಡುತ್ತಾ ಅಜ್ಜಿ ಚಿನ್ನದ ಸರ ಹಳೇಯದ್ದೇ?. ನಾನು ಸೇಟು ನಿಮ್ಮ ಚಿನ್ನದ ಸರ ಪಾಲಿಶ್ ಮಾಡಿಕೊಡುತ್ತೇನೆ ಎಂದು ಹೇಳಿ ಸರ ಬಿಚ್ಚಿಸಿದ್ದಾನೆ. ನಂತರ ಆತನೇ ಸರವನ್ನು ಪೇಪರ್ ನಲ್ಲಿ ಸುತ್ತಿ ಡ್ರಾಯರ್ ನಲ್ಲಿ ಇಟ್ಟಿದ್ದಾನೆ.
ನಂತರ, 50 ರೂಪಾಯಿಯ ಚಾಕಲೇಟ್ ಖರೀದಿಸಿ ಚಿಲ್ಲರೆ ತರುವುದಾಗಿ ಹೇಳಿ ಅಲ್ಲಿಂದ ತೆರಳಿದ್ದಾನೆ. ಬಹಳ ಹೊತ್ತಾದ್ರು ಆತ ಬರದಿದ್ದಾಗ ಅಜ್ಜಿ ಡ್ರಾಯರ್ ನಲ್ಲಿದ್ದ ಕವರ್ ಬಿಚ್ಚಿ ನೋಡಿದ್ದು, ಚಿನ್ನದ ಸರ ಕಳವಾಗಿರುವುದು ಬೆಳಕಿಗೆ ಬಂದಿದೆ. ಬರೋಬ್ಬರಿ 28 ಗ್ರಾಂ. ತೂಕದ ಚಿನ್ನದ ಸರ ಕಳ್ಳತನವಾಗಿದ್ದು, ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.