ಬೆಂಗಳೂರು: ಕೃಷಿ ಮಾರಾಟ ಮಂಡಳಿಗೆ 48 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಸದ್ಯ ಪ್ರಕರಣದ ತನಿಖೆ ನಡೆಸಿ 1,400 ಪುಟಗಳ ಸುದೀರ್ಘ ಚಾರ್ಜ್ಶೀಟ್ಅನ್ನು ನ್ಯಾಯಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಮೋಸ ಮಾಡಿದ ಬ್ಯಾಂಕ್ ಉದ್ಯೋಗಿಗಳನ್ನ ಆರೋಪಿಗಳನ್ನಾಗಿ ಉಲ್ಲೇಖಿಸಿದ್ದಾರೆ.
ಫಿಕ್ಸೆಡ್ ಡೆಪಾಸಿಟ್ ಹಣ ಇಡಲು ಸಿಂಡಿಕೇಟ್ ಬ್ಯಾಂಕಿಗೆ ಕೃಷಿ ಮಾರಾಟ ಮಂಡಳಿ ಕೊಟೇಶನ್ ಕೇಳಿತ್ತು. ಈ ವೇಳೆ ಹೆಚ್ಚು ಬಡ್ಡಿ ನೀಡುವುದಾಗಿ ಉತ್ತರಹಳ್ಳಿಯ ಸಿಂಡಿಕೇಟ್ ಬ್ಯಾಂಕ್ ಶಾಖೆ ಆಫರ್ ನೀಡಿತ್ತು. ಹೀಗಾಗಿ 100 ಕೋಟಿ ಹಣವನ್ನು ಬೆಂಗಳೂರು ಕೃಷಿ ಮಾರಾಟ ಮಂಡಳಿ ಡೆಪಾಸಿಟ್ ಮಾಡಿತ್ತು. ಆದರೆ ಸ್ವಲ್ಪ ದಿನಗಳ ಬಳಿಕ ಡೆಪಾಸಿಟ್ ಬಗ್ಗೆ ಕೃಷಿ ಮಾರಾಟ ಮಂಡಳಿ ವಿಚಾರಿಸಿದಾಗ 100 ಕೋಟಿಯ ಬದಲು 50 ಕೋಟಿ ರೂ. ಮಾತ್ರ ಡೆಪಾಸಿಟ್ ಇರುವುದು ಬಯಲಾಗಿತ್ತು. ಹೀಗಾಗಿ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ನೀಡಿದ್ದರು.
ಸರ್ಕಾರದ ಹಣವಾಗಿರುವುದರಿಂದ ಗೃಹ ಸಚಿವ ಬಸವರಾಜ ಬೊಮ್ಮಯಿ ನಗರ ಪೊಲೀಸ್ ಆಯುಕ್ತರಿಗೆ ಸಿಸಿಬಿಗೆ ಪ್ರಕರಣ ವರ್ಗಾವಣೆ ಮಾಡುವಂತೆ ಸೂಚಿಸಿದ ಹಿನ್ನೆಲೆ ಆಯುಕ್ತರು ಸಿಸಿಬಿ ಹೆಚ್ವುವರಿ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ವರ್ಗಾವಣೆ ಮಾಡಿದ್ದರು.
ಇನ್ನು ಸಿಸಿಬಿ ತಂಡದ ತನಿಖೆ ವೇಳೆ ಬ್ಯಾಂಕ್ ಸಿಬ್ಬಂದಿಗಳೂ ಅಕ್ರಮದಲ್ಲಿ ಭಾಗಿಯಾಗಿರುವ ಪತ್ತೆ ಹಿನ್ನೆಲೆ ಕೃಷಿ ಮಾರಾಟ ಮಂಡಳಿಯ ಬ್ಯಾಂಕ್ ಸಿಬ್ಬಂದಿ, ಮ್ಯಾನೇಜರ್ ಸೇರಿ 12 ಜನರನ್ನ ಹುಡುಕಿ ಬಂಧಿಸಿದ್ದರು. ಸದ್ಯ ಆರೋಪಿಗಳು ಮಾಡಿರುವ ಕೃತ್ಯದ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.