ಬೆಂಗಳೂರು: ಇದೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಆಯೋಜನೆಗೊಂಡಿದ್ದ ಮಾವು ಹಾಗೂ ಹಲಸು ಮೇಳ ಇಂದಿಗೆ ಕೊನೆಯಾಗಿದ್ದು, ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಎರಡು ಕಡೆ ಆಯೋಜಿಸಿದ್ದ ಮಾವು ಹಾಗೂ ಹಲಸು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿದ್ದು, ಮೇಳವೂ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆಯಿಂದ ಮೇ 18 ರಿಂದ ಆರಂಭವಾಗಿದ್ದ ಮೇಳವು ಇಂದು ಮುಗಿದಿದೆ.. ದೇವನಹಳ್ಳಿಯಲ್ಲಿ ನಡೆದ ನಾಲ್ಕು ದಿನಗಳ ಮಾವು ಹಾಗೂ ಹಲಸು ಮೇಳದಲ್ಲಿ ಸುಮಾರು 10ಟನ್ಗೂ ಹೆಚ್ಚು ಮಾವು ಮಾರಾಟವಾಗಿದೆ. ಇನ್ನೊಂದು ಕಡೆ ಹಲಸಿಗೂ ಉತ್ತಮ ಪ್ರಮಾಣದ ಬೇಡಿಕೆ ಸೃಷ್ಟಿಯಾಗಿದ್ದು, ಹೆಚ್ಚು ಹಣ್ಣನ್ನು ಗ್ರಾಹಕರು ಖರೀದಿಸಿದ್ದಾರೆ.
ನಂದಿ ಬೆಟ್ಟ, ಟಿಪ್ಪು ಕೋಟೆಯಂತಹ ಪ್ರವಾಸಿ ತಾಣಕ್ಕೆ ಬಂದು ಹೋಗುವ ಪ್ರವಾಸಿಗರು ಹೆಚ್ಚಾಗಿ ಮೇಳಕ್ಕೆ ಬಂದಿರುವುದು ವಿಶೇಷ. ಇನ್ನೊಂದು ವಿಶೇಷ ಎಂದರೆ ವೀಕ್ ಎಂಡ್ನಲ್ಲಿ ಹೆಚ್ಚು ಹಣ್ಣುಗಳು ಮಾರಾಟವಾಗಿವೆ. ಕಾರ್ಬೈಡ್ ಬಳಸದೆ ನೈಸರ್ಗಿಕವಾಗಿ ಮರದಲ್ಲಿ ಮಾಗಿಸಿದ ಮಾವಿನ ಹಣ್ಣನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದು ಗ್ರಾಹಕರಿಗೆ ಖುಷಿ ನೀಡಿದ್ದು, ಹೆಚ್ಚು ಹಣ್ಣುಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದರು.
ವಿವಿಧ ತಳಿಯ ಹಣ್ಣುಗಳು ಮೇಳದಲ್ಲಿ ಆಕರ್ಷಕವಾಗಿದ್ದವು, ರುಚಿ ರುಚಿಯ ಆಲ್ಫಾನ್ಸೊ, ರಸಪುರಿ, ಬಾದಾಮಿ, ನೀಲಂ, ಮಲಗೋವ, ತೋತಾಪುರಿ, ಮಲ್ಲಿಕಾ, ನಾಜೂರ್ ಬಾದಾಮ್ ಸೇರಿದಂತೆ ವಿವಿಧ ತಳಿಗಳ ಮಾವು ಹಾಗೂ ಹಲಸಿನ ಹಣ್ಣುಗಳನ್ನು ಒಟ್ಟು 20 ಮಳಿಗೆಗಳಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಎಲ್ಲಾ ಮಳಿಗೆಗಳಲ್ಲಿ ಉತ್ತಮ ವ್ಯಾಪಾರ ಆಗಿದ್ದು, ಮಾರಾಟಗಾರರು ಸಹ ಖುಷಿಯಿಂದ ವ್ಯಾಪಾರ ನಡೆಸಿದ್ದಾರೆ. ಈ ಮಾವು ಹಲಸು ಮೇಳಕ್ಕೆ ಕೋಲಾರ, ದೊಡ್ಡಬಳ್ಳಾಪುರ, ಶ್ರೀನಿವಾಸಪುರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆಯಿಂದ ಮಾವು ಹಾಗೂ ಹಲಸು ಬೆಳೆಯುವ ರೈತರು ಪಾಲ್ಗೊಂಡಿದ್ದು, ಮಧ್ಯವರ್ತಿಗಳ ಹಾವಳಿ ಇಲ್ಲದೆ ಗ್ರಾಹಕರಿಗೆ ನೇರವಾಗಿ ಹಣ್ಣುಗಳನ್ನು ಮಾರಾಟ ಮಾಡಿದ್ರು.
ಮೊದಲ ಬಾರಿಗೆ ನಡೆದ ಈ ಮೇಳದಲ್ಲಿ ನಮಗೆ ನಿರೀಕ್ಷೆ ಮಾಡಿದಷ್ಟು ಲಾಭ ಸಿಕ್ಕಿಲ್ಲ ನಿಜ. ಆದರೆ ಲಾಭ ಮಾತ್ರ ಸಿಕ್ಕಿದೆ. ಮೊದಲ ಸಲ ಆಗಿರುವುದರಿಂದ ಇದು ಮಾಮೂಲಿ. ಎರಡನೇ ಸಲ ಹೆಚ್ಚು ಲಾಭ ಸಿಗಲಿದೆ ಎಂದು ಮಾರಾಟಗಾರರು ವಿಶ್ವಾಸ ವ್ಯಕ್ತಪಡಿಸಿದರು.