ಹೊಸಕೋಟೆ : ನಗರದಿಂದ ಬೆಂಗಳೂರು ಸೇರಿದಂತೆ ಬೇರೆ ಬೇರೆ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗೆ ಸರ್ಕಾರಿ ಬಸ್ಗಳಲ್ಲಿ ಸರಿಯಾದ ಸಾಮಾಜಿಕ ಅಂತರದ ವ್ಯವಸ್ಥೆ ಕಾಪಾಡದೆ ನಿರ್ಲಕ್ಷ್ಯ ತೋರಲಾಗುತ್ತಿದೆ.
ಅತ್ತಿಬೆಲೆ, ಸರ್ಜಾಪುರ, ವಿಜಯಪುರ, ದೇವನಹಳ್ಳಿ, ಯಲಹಂಕ, ಕೋಲಾರ ಮಾಲೂರು, ಕೆಜಿಎಫ್, ಚಿಂತಾಮಣಿ ಇತ್ಯಾದಿ ಸ್ಥಳಗಳಿಗೆ ಸಂಚರಿಸುವ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ರಕ್ಷಣೆ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರಲಾಗುತ್ತಿದೆ. 58 ಆಸನಗಳ ಸಾಮರ್ಥ್ಯದ ಬಸ್‌ನಲ್ಲಿ ಪ್ರತಿ ಸೀಟಿಗೆ ಒಬ್ಬ ಪ್ರಯಾಣಿಕರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರೂ ಸಹ ಮಹಿಳೆಯರು ವೃದ್ಧರು ಸೇರಿದಂತೆ ಇಬ್ಬರು ಕುಳಿತಿರುವುದು ಕಂಡುಬರುತ್ತಿವೆ.
ಪ್ರಯಾಣಿಕರು ಮಾಸ್ಕ್ ಧರಿಸದೇ ಪ್ರಯಾಣಿಸುತ್ತಿದ್ದಾರೆ, ನಿರ್ವಾಹಕರು ಕೇವಲ ಹಣ ಪಡೆದು ಟಿಕೆಟ್ ನೀಡುವುದಕ್ಕಷ್ಟೇ ಸೀಮಿತಗೊಂಡಿದ್ದಾರೆ. ಬಿಎಂಟಿಸಿ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಹರಡುತ್ತಿರುವುದು ಹೆಚ್ಚಾಗುತ್ತಿದ್ದರೂ ಸಹ ಅಧಿಕಾರಿಗಳಾಗಲೀ, ಸಿಬ್ಬಂದಿಯಾಗಲೀ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವುದು ಭೀತಿ ಮೂಡಿಸಿದ್ದರೂ ಪರ್ಯಾಯ ವ್ಯವಸ್ಥೆಯಿಲ್ಲದ ಕಾರಣ ಪ್ರಯಾಣಿಕರು ಅಸಹಾಯಕರಾಗಿದ್ದಾರೆ.
ಕೆಎಸ್‌ಆರ್‌ಟಿಸಿಯಲ್ಲೂ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುತ್ತಿಲ್ಲ. ಬಸ್ ಸಂಚಾರ ಆರಂಭ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹತ್ತುವ ಮೊದಲೇ ಥರ್ಮಲ್ ಸ್ಕ್ಯಾನ್ ಮಾಡಲಾಗುತ್ತಿತ್ತು ಇದೀಗ ಅದು ಕೂಡ ಕಣ್ಮರೆಯಾಗಿದೆ.
ಮೊದಲು ಒಂದು ಬಸ್ಸಿನಲ್ಲಿ ನಿಗದಿಪಡಿಸಿರುವ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿತ್ತು ಇದರೊಂದಿಗೆ, ನಿರ್ವಾಹಕರು ಟಿಕೆಟ್ ನೀಡುವ ಸಂದರ್ಭದಲ್ಲಿ ಪ್ರಯಾಣಿಕರ ಹೆಸರು, ಮೊಬೈಲ್ ನಂಬರ್ಗಳನ್ನು ಸಹ ದಾಖಲಿಸಿಕೊಳ್ಳುತ್ತಿದ್ದರು ಆದರೆ ಈಗ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಮಾಡುತ್ತಿಲ್ಲ.
ಯಾವ ಸಾರಿಗೆ ಅಧಿಕಾರಿಗಳು ಪ್ರಯಾಣಿಕರ ರಕ್ಷಣೆಗೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳದಿರುವುದು ಕಂಡು ಬಂದಿತು.