ಹೊಸಕೋಟೆ: ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಅವರ ಸಹೋದರ, ಬಿಬಿಎಂಪಿ ಮಾಜಿ ಸದಸ್ಯ ಎನ್.ಪಿಳ್ಳಪ್ಪ ಅವರನ್ನು ಕಾಂಗ್ರೆಸ್ ಅಖಾಡಕ್ಕಿಳಿಸಿದೆ. ಈ ಮಧ್ಯೆ ತಮ್ಮನ ವಿರುದ್ಧ ಅಣ್ಣ ವಾಗ್ದಾಳಿ ನಡೆಸಿದ್ದಾರೆ.
ಅಣ್ಣ ಎಂದೂ ನೋಡದೆ ನನ್ನ ತಮ್ಮ ನನಗೆ ಮೋಸ ಮಾಡಿದ್ದಾನೆ. ಆತನ ನಯವಂಚಕ ಮಾತುಗಳಿಗೆ ಹೊಸಕೋಟೆ ಜನ ಮಾರುಹೋಗಬಾರದು. ನಾಗರಾಜ್ ಮೊದಲ ಬಾರಿಗೆ ಹೊಸಕೋಟೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ನಾನು ತಾಲೂಕಿನಾದ್ಯಂತ ಓಡಾಡಿ, ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪ್ರತಿ ಹಳ್ಳಿ ಸುತ್ತಿ ಗೆಲ್ಲಿಸುವ ಕೆಲಸ ಮಾಡಿದೆ. ಬಿಬಿಎಂಪಿಯಲ್ಲಿ ಮೂರು ಬಾರಿ ಗೆದ್ದ ನನಗೆ ಟಿಕೆಟ್ ತಪ್ಪಿಸಿ ಮೋಸ ಮಾಡಿ, ತನ್ನ ಮಗನನ್ನು ನಿಲ್ಲಿಸಿದಾಗಲೂ ಪಕ್ಷದ ಆದೇಶದಂತೆ ನಾನು ಅವರ ಪರವಾಗಿ ಕೆಲಸ ಮಾಡಿದೆ. ಆದರೂ ನನ್ನ ವಿರುದ್ಧ ಸಂಚು ಮಾಡಿ ರಾಜಕೀಯವಾಗಿ ಮುಗಿಸಲು ನೋಡಿದ. ಬೆಳೆಸಿದ ಪಕ್ಷಕ್ಕೆ ದ್ರೋಹ ಮಾಡಿದ್ದಾನೆ ಎಂದು ತಮ್ಮನ ವಿರುದ್ಧ ಪಿಳ್ಳಪ್ಪ ಕಿಡಿಕಾರಿದ್ದಾರೆ.
ಇನ್ನು, ಹೊಸಕೋಟೆ ಮಹಾಜನತೆ ನಾಗರಾಜ್‌ಗೆ ತಕ್ಕ ಪಾಠ ಕಲಿಸಬೇಕು. ಆತನ ಮೋಸದಾಟ, ವಂಚನೆಗಳಿಗೆ ತೆರೆ ಎಳೆಯಬೇಕು ಎಂದು ಮನವಿ ಮಾಡಿದ್ದಾರೆ.