ದೊಡ್ಡಬಳ್ಳಾಪುರ : ನಗರದಲ್ಲಿ ಮಹಿಳಾ ಪದವಿ ಕಾಲೇಜು ಪ್ರಾರಂಭವಾಗಿ ಸುಮಾರು 6 ವರ್ಷಗಳೇ ಕಳೆದಿದೆ. ಆದರೆ ಹೇಳಿಕೊಳ್ಳಲು ಸ್ವಂತ ಕಟ್ಟಡವಿಲ್ಲದೇ ಗಬ್ಬು ನಾರುವ ಕೊಠಡಿಗಳಲ್ಲೆ ವಿದ್ಯಾರ್ಥಿಗಳು ಪಾಠ ಪ್ರವಚನ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ 2014ರಲ್ಲಿ ಮಹಿಳಾ ಪದವಿ ಕಾಲೇಜನ್ನು ಪ್ರಾರಂಭ ಮಾಡಲಾಗಿದೆ. ಈ ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದ ಕಾರಣ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿಯೇ 6 ಕೊಠಡಿಗಳನ್ನ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಕೊಡಲಾಗಿದೆ. ಸದ್ಯ 174 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಕಳೆದ ಆರು ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೇ ಹಲವು ಸಮಸ್ಯೆಗಳನ್ನು ಕಾಲೇಜು ಎದುರಿಸುತ್ತಿದೆ. ಮಹಿಳಾ ಕಾಲೇಜಿಗೆ ನೀಡಿರುವ ಕೊಠಡಿಗಳ ಹಿಂಭಾಗದಲ್ಲಿ ಹಳೆಯ ಶೌಚಾಲಯವಿದ್ದು, ಅದರಿಂದ ದುರ್ನಾತ ಬರುತ್ತಿದೆ. ಈ ಗಬ್ಬು ನಾರುವ ಕೊಠಡಿಯಲ್ಲಿಯೇ ವಿದ್ಯಾರ್ಥಿಗಳು ಪಾಠಗಳನ್ನು ಕೇಳಬೇಕಾದ ಅನಿವಾರ್ಯತೆ ಇದೆ. ಕೊಠಡಿಗಳ ಬಾಗಿಲು, ಕಿಟಕಿಗಳು ಮುರಿದು ಹೋಗಿವೆ. ವಿದ್ಯುತ್ ಸಂಪರ್ಕವಿಲ್ಲ, ಫ್ಯಾನ್ ವ್ಯವಸ್ಥೆಯಂತೂ ಕೇಳೋ ಹಾಗೇ ಇಲ್ಲ.
ಮೂಲಭೂತ ಸೌಕರ್ಯದಿಂದ ಬೇಸತ್ತು ಸ್ವತಃ ವಿದ್ಯಾರ್ಥಿಗಳೇ ಹೋಗಿ ತಹಸೀಲ್ದಾರ್ಗೆ ಮನವಿ ಮಾಡಿದ್ದು, ಅದಷ್ಟು ಬೇಗ ಸಮಸ್ಯೆ ಪರಿಹರಿಸಿ ಇಲ್ಲವಾದರೇ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇಲಾಖೆಯಿಂದ ಕಟ್ಟಡಕ್ಕಾಗಿ ಹಣ ಬಿಡುಗಡೆಯಾಗಿದೆ. ಆದರೆ ಸ್ಥಳಾವಕಾಶದ ಕೊರತೆಯಿಂದ ಮಹಿಳಾ ಕಾಲೇಜಿನ ಕಟ್ಟಡದ ಕಾಮಗಾರಿ ಶುರುವಾಗಿಲ್ಲ. ಸುಸಜ್ಜಿತವಾದ ಕಾಲೇಜಿನ ಸ್ವಂತ ಕಟ್ಟಡ ಶುರುವಾದರೆ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದ್ದು, ಹೊಸ ಹೊಸ ಕೋರ್ಸ್ಗಳು ಪ್ರಾರಂಭವಾಗಲಿವೆ.