ದೇವನಹಳ್ಳಿ: ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ವಾರದಲ್ಲಿ ಮೂರು ದಿನ ವೈದ್ಯರ ತಂಡ ಹಳ್ಳಿಗಳಿಗೆ ತೆರಳಿ, ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ ಎಂದು ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಮಿನಿ ವಿಧಾನಸೌಧದ ಆವರಣದಲ್ಲಿಂದು ಕೋವಿಡ್-19 ನಿಯಂತ್ರಣಕ್ಕೆ ಗ್ರಾಮ ಮಟ್ಟದಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ ನೀಡುವ ವಾಹನಗಳಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಕೋವಿಡ್ ರೋಗಲಕ್ಷಣಗಳಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿ, ಸೋಂಕು ದೃಢಪಟ್ಟರೆ, ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಬೇಕು ಎಂದು ಗ್ರಾಮೀಣ ಜನರಿಗೆ ಕೋವಿಡ್ ಕುರಿತು ಅರಿವು ಮೂಡಿಸಬೇಕು. ಕೋವಿಡ್ ರೋಗಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ನೀಡುವುದರಿಂದ ಜೀವ ಉಳಿಸಬಹುದಾಗಿದ್ದು, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಮಾತ್ರ ಆಸ್ಪತ್ರೆಗೆ ದಾಖಲಿಸಬಹುದು ಎಂದರು.
ವೈದ್ಯರು, ನರ್ಸ್‌ಗಳು ಹಾಗೂ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಕೊರೊನಾ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಕೋವಿಡ್ ರೋಗಿಗಳಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದ್ದು, ಆರೋಗ್ಯ ಸಚಿವರಾದ ಸುಧಾಕರ್ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸೂಕ್ತ ಔಷಧ ದೊರೆಯಲಿದೆ ಎಂದರು. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅಗತ್ಯವಾದ ಆಕ್ಸಿಜನ್ ತಲುಪುತ್ತಿದ್ದು, ಆಕ್ಸಿಜನ್ ಸಮಸ್ಯೆ ಇರುವುದಿಲ್ಲ. ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ವ್ಯಾಕ್ಸಿನ್ ಕೊರತೆಯಿದ್ದು, ಶೀಘ್ರವೇ ದೊರೆಯಲಿವೆ. ಲಸಿಕೆ ನೀಡುವಾಗ ಮೊದಲ ಆದ್ಯತೆಯಾಗಿ ಅದೇ ಜಿಲ್ಲೆಯ ಜನತೆಗೆ ಲಸಿಕೆ ನೀಡಲು ಕ್ರಮವಹಿಸಲಾಗುವುದು ಎಂದರು.
ರಾಜ್ಯದಲ್ಲಿ ಲಾಕ್‌ಡೌನ್ ಮಾಡಿರುವ ಕಾರಣದಿಂದ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಲಾಕ್‌ಡೌನ್ ಅಂತ್ಯವಾಗುವ ಮೂರು ದಿನಗಳ ಮುನ್ನ ಮುಖ್ಯಮಂತ್ರಿಗಳ ನೇತೃತ್ವದ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಲಾಕ್‌ಡೌನ್ ಮುಂದುವರಿಸಬೇಕೋ ಅಥವಾ ಬೇಡವೇ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಲಾಕ್‌ಡೌನ್ ಮುಂದುವರೆಸುವುದು ಒಳ್ಳೆಯದು. ಬೆಂಗಳೂರಿನಲ್ಲಿ 22 ಸಾವಿರ ಇದ್ದ ಕೋವಿಡ್ ಪ್ರಕರಣಗಳು ಲಾಕ್ಡೌನ್ನಿಂದ 8 ಸಾವಿರಕ್ಕೆ ಇಳಿದಿವೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಮೊದಲೇ ಲಾಕ್‌ಡೌನ್ ಜಾರಿ ಮಾಡಿದ ಹಿನ್ನೆಲೆ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಕೋವಿಡ್ ಪ್ರಕರಣಗಳ ಇಳಿಕೆಯಿಂದ ಬೆಡ್ ಮತ್ತು ಆಕ್ಸಿಜನ್ ಸಿಗುವುದು ಸರಳವಾಗಿದೆ. ಇನ್ನೆರಡು ದಿನದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದ್ದು, ಸರ್ಕಾರ ಲಾಕ್‌ಡೌನ್ ಮುಂದುವರಿಸುವ ಯೋಚನೆಯಲ್ಲಿದೆ. ಅಂತಿಮ ತೀರ್ಮಾನ ಮುಖ್ಯಮಂತ್ರಿಗಳು ಮಾಡಲಿದ್ದಾರೆ ಎಂದರು.