ದೊಡ್ಡಬಳ್ಳಾಪುರ : ಜಮೀನು ವ್ಯವಹಾರವನ್ನು ಮಾಡಿಸಿದ್ದ ಮಧ್ಯವರ್ತಿಗೆ ಭೂಮಿ ಖರೀದಿ ಮಾಡಿದ್ದ ವ್ಯಕ್ತಿ ಕಮಿಷನ್ ರೂಪದಲ್ಲಿ 5 ಲಕ್ಷದ ಚೆಕ್ ನೀಡಿದ್ದಾರೆ. ಚೆಕ್ ಪಡೆದ ಮಧ್ಯವರ್ತಿ 5 ಲಕ್ಷದ ಬದಲಿಗೆ 65 ಲಕ್ಷ ರೂಪಾಯಿ ಎಂದು ಬರೆದುಕೊಂಡು ಹಣ ಡ್ರಾ ಮಾಡಲು ಬ್ಯಾಂಕ್ಗೆ ಹೋಗಿ ತಗಲಾಕಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹೋಬಳಿಯ ದರ್ಗಾಪುರ ಸರ್ವೆ ನಂಬರ್ 32/6 ಮತ್ತು 32/4 ರಲ್ಲಿ ಒಟ್ಟು ಎರಡು ಎಕರೆಯನ್ನು ಜಮೀನು ಮಾಲೀಕರಿಂದ ಆಂಜಿನಪ್ಪ ಎಂಬುವರು ಜಿಪಿಎ ಮಾಡಿಸಿಕೊಂಡಿದ್ದಾರೆ. ಈ ವ್ಯವಹಾರ ಎಂ ಸಿ ಚಂದ್ರಶೇಖರ್ ಎಂಬಾತನ ಮುಂದಾಳತ್ವದಲ್ಲಿ ನಡೆದಿತ್ತು. ಸದರಿ ಕೆಲಸಕ್ಕೆ ಮಧ್ಯವರ್ತಿಯು ಏಜೆಂಟ್ ಕಮಿಷನ್ ಆಗಿ 10 ಲಕ್ಷ ರೂ. ಗೆ ಮಾತನಾಡಿದ್ದರು. ಇದಕ್ಕಾಗಿ ಜಮೀನು ಖರೀದಿ ಮಾಡಿದ್ದ ಆಂಜಿನಪ್ಪ, ಚಂದ್ರಶೇಖರ್ ಅವರಿಗೆ ತಲಾ ಐದು ಲಕ್ಷ ರೂ.ಗಳ ಎರಡು ಚೆಕ್ಗಳನ್ನು ನೀಡಿದ್ದರು. ಮೊದಲ ಚೆಕ್ ಡ್ರಾ ಮಾಡಿಕೊಂಡಿದ್ದ ಚಂದ್ರಶೇಖರ್, ಎರಡನೇ ಚೆಕ್ ಡ್ರಾ ಮಾಡಿಕೊಳ್ಳುವ ಮುನ್ನ ಅತಿಯಾಸೆಗೆ ಬಿದ್ದು 5 ಎಂಬ ಅಂಕಿಯ ಹಿಂದೆ ಯಾವುದೇ ಅನುಮಾನ ಬಾರದಂತೆ 6 ನಂಬರ್ ಅನ್ನು ಬರೆದು ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಿಕೊಳ್ಳಲು ಹೋಗಿದ್ದಾನೆ.
ಇದನ್ನೂ ಓದಿ : ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅಪರಾಧಿ ; ಹಣ ಪಾವತಿಗೆ ತಪ್ಪಿದರೆ 6 ತಿಂಗಳು ಜೈಲು ಶಿಕ್ಷೆ
ಚೆಕ್ ನೋಡಿದ ಬ್ಯಾಂಕ್ ಸಿಬ್ಬಂದಿ ಅನುಮಾನಗೊಂಡು ಚೆಕ್ ಖಾತೆಯ ಗ್ರಾಹಕರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಬಳಿಕ, ಮಾಲೀಕನು ನಾನು ಕೇವಲ 5 ಲಕ್ಷ ರೂಪಾಯಿಯ ಚೆಕ್ ಕೊಟ್ಟಿದ್ದೇನೆ. 65 ಲಕ್ಷ ರೂ. ಚೆಕ್ ಕೊಟ್ಟಿಲ್ಲ ಎಂದು ಹೇಳಿದಾಗ ಮಧ್ಯವರ್ತಿ ಚಂದ್ರಶೇಖರ್ ಅಸಲಿ ಸತ್ಯ ಹೊರ ಬಂದಿದೆ. ಇದರಿಂದ ಎಚ್ಚೆತ್ತ ಆಂಜಿನಪ್ಪ, ಚೆಕ್ ತಿದ್ದಿ ನಂಬಿಕೆ ದ್ರೋಹ ಎಸಗಿದ ಚಂದ್ರಶೇಖರ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ಚೆಕ್ ಬೌನ್ಸ್ ಪ್ರಕರಣ: ಸಾಕ್ಷಿ ಒದಗಿಸದ ನಟಿ - ಅಮೀಶಾ ಪಟೇಲ್ಗೆ 500 ರೂ. ದಂಡ!
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಆಂಜಿನಪ್ಪ ಮಗ ಲೋಕೇಶ್, ಎಂ ಸಿ ಚಂದ್ರಶೇಖರ್ ಅವರು ನಮಗೆ ಮುಂಚೆಯಿಂದಲೇ ಪರಿಚಯವಿದ್ದರು. ಯಾವುದೋ ಒಂದು ಪ್ರಾಪರ್ಟಿ ಕೊಡಿಸುತ್ತೇನೆ ಅಂತಾ ನಮಗೆ ಮೋಸ ಮಾಡಿದ್ದಾರೆ. 5 ಲಕ್ಷ ಇರುವ ಚೆಕ್ ಅನ್ನು 65 ಲಕ್ಷವೆಂದು ತಿದ್ದುಪಡಿ ಮಾಡಿದ್ದು, ಬ್ಯಾಂಕ್ನವರು ಕರೆ ಮಾಡಿ ಮಾಹಿತಿ ನೀಡಿದಾಗ ವಿಷಯ ತಿಳಿಯಿತು. ಕೂಡಲೇ ಚೆಕ್ ಅನುಮೋದನೆ ಮಾಡಬಾರದೆಂದು ಸೂಚಿಸಿದೆವು. ಹಾಗೆಯೇ, ಆರೋಪಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದು, ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದೆವು ಎಂದಿದ್ದಾರೆ.