ಆನೇಕಲ್: ಆನೇಕಲ್ ಇತಾಹಾಸದಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದ ಖ್ಯಾತಿಗೆ ಒಳಗಾಗಿರುವ ಸೃಜನಾ. ಡಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಅಭಿನಂದಿಸಿದ್ದಾರೆ. ಸ್ವತಃ ತಾವೇ ವಿದ್ಯಾರ್ಥಿನಿ ಮನೆಗೆ ತೆರಳಿ ಸನ್ಮಾನಿಸಿದ್ದಲ್ಲದೇ, ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಎಸ್ಪಿ ರಾಮ್ ನಿವಾಸ್ ಸೆಪಟ್ ಆಗಮಿಸಿ ವಿದ್ಯಾರ್ಥಿನಿಯ ಮನೆ ಬಾಗಿಲಿಗೆ ತೆರಳಿ ಮನೆಯಲ್ಲಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿದರು. ಅಲ್ಲದೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಪುಟ್ಟಯ್ಯರ ಮಗಳು ಅತ್ಯಧಿಕ ಅಂಕ ಪಡೆದು ಇತರೆ ಪೊಲೀಸ್ ಮಕ್ಕಳಿಗೆ ಮಾದರಿಯಾಗಿದ್ದಾಳೆ.
ತಮ್ಮ ಪತ್ನಿ ರೇಣುಕಾ ಸೆಪಟ್ ಐಪಿಎಸ್ ಅಧಿಕಾರಿಯಾಗಿದ್ದು, ವಿದ್ಯೆ ಎಂದಿಗೂ ಸಾಧಕರ ಸ್ವತ್ತು. ಎಷ್ಟೇ ಓದಿದ್ದರೂ ಜನರಿಗೆ ಅದು ಅನುಕೂಲವಾಗುವಂತಿರಬೇಕು. ಮುಂದೆ ಜೀವನದಲ್ಲಿ ಮುಕ್ತ, ವಿಶಾಲ ಮನೋಭಾವದಿಂದ ಸಮಾಜಕ್ಕೆ ಸೇವೆ ಸಲ್ಲಿಸುವಂತಾಗಿ ಅಂತಾ ಸೃಜನಾಳಿಗೆ ಎಸ್‌ಪಿ ರಾಮ ನಿವಾಸ್ ಸೆಪಟ್ ಕಿವಿ ಮಾತು ಹೇಳಿದರು. ಬೆಂಗಳೂರಿಗಷ್ಟೇ ಅಲ್ಲ, ಗಡಿ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಸೃಜನಾಳ ಸಾಧನೆ ಮಾದರಿ. ಸೃಜನಾಳ ಸಾಧನೆಗೆ ಬೆಂಬಲವಾದ ಆಕೆಯ ಕುಟುಂಬ ಸದಸ್ಯರೂ ಶ್ಲಾಘನೆಗೆ ಅರ್ಹರು.
ಮುಂದಿನ ದಿನಗಳಲ್ಲಿ ಇಂತಹ ಶೈಕ್ಷಣಿಕ ಸಾಧನೆಗೈದವರನ್ನು ನಾವು ಗೌರವಿಸಲಿದ್ದೇವೆ. ಇದರಿಂದ ನಾವೂ ಸಾರ್ವಜನಿಕರ ಸಾಧನೆಗಳನ್ನು ಪ್ರೋತ್ಸಾಹಿಸಿ ಸಮಾಜವನ್ನು ಅಧ್ಯಯನಶೀಲವಾಗಿ ಮಾರ್ಪಡಿಸುವ ಸಿದ್ದಾಂತಕ್ಕೆ ಮರಳಿಸಬೇಕಿದೆ. ಪೊಲೀಸರೆಂದರೆ ಸಮಾಜದಿಂದ ಬೇರೆಯಲ್ಲ, ಅವರೂ ಸಮಾಜದಲ್ಲೊಬ್ಬರು. ಸಾಧನೆಗೆ ಮುಕ್ತವಾಗಿ ಅಭಿನಂದಿಸಿ ಇನ್ನಷ್ಟು ಪ್ರತಿಭೆಗಳಿಗೆ ಮಾದರಿಯಾಗುವಂತೆ ಮಾಡಬೇಕಿದೆ ಎಂದರು.