ಹೊಸಕೋಟೆ: ಲಾಕ್‌ಡೌನ್ ಸಂಕಷ್ಟದಲ್ಲಿಯೂ ರೈತರು ಬೆಳೆದ ಕ್ಯಾರೆಟ್‌ಗೆ ನ್ಯಾಯಯುತ ಬೆಲೆ ಸಿಗದೆ ತೋಟದಲ್ಲೇ ಕೊಳೆಯುವಂತಹ ಸ್ಥಿತಿ ನಿರ್ಮಾಣವಾಗಿದ್ದು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ರೈತ ಸಂಕಷ್ಟದಲ್ಲಿದ್ದಾನೆ.
ತಾಲೂಕಿನ ನಂದಗುಡಿ, ಸೂಲಿಬೆಲೆ, ಜಡಿಗೇನಹಳ್ಳಿ, ಅನುಗೊಂಡನಹಳ್ಳಿ ರೈತರು ಕ್ಯಾರೆಟ್ ಬೆಳೆ ಬೆಳೆದಿದ್ದಾರೆ. ಆದರೆ, ಈಗ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಕಸಬಾ ಹೋಬಳಿಗಳಲ್ಲಿ ನೂರಾರು ಹೆಕ್ಟೇರ್ ಪ್ರದೇಶಗಳಲ್ಲಿ ತರಕಾರಿ ಬೆಳೆದಿದ್ದು ನಷ್ಟ ಉಂಟಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಂದಗುಡಿ ಹೋಬಳಿಯ ಬನಹಳ್ಳಿ ಗ್ರಾಮದ ರೈತನೊಬ್ಬ ಒಂದು ಹೆಕ್ಟೇರ್ ಜಮೀನಿನಲ್ಲಿ ಕ್ಯಾರೆಟ್ ಬೆಳೆದು ಕೈ ಸುಟ್ಟುಕೊಂಡಿದ್ದಾನೆ. ಬೆಳೆಯೇನೋ ಚೆನ್ನಾಗೇ ಬಂತು. ಆದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೇ ಮತ್ತು ಕೂಲಿ ಕಾರ್ಮಿಕರ ಅಭಾವದಿಂದ ಬೆಳೆ ಕೀಳಲಾಗದೆ ಹಾಗೆಯೇ ಬಿಟ್ಟಿದ್ದಾರೆ.
ಬಿತ್ತನೆ ಬೀಜ, ಔಷಧೋಪಚಾರ ಕೂಲಿಯೆಲ್ಲಾ ಕೂಡಿದರೆ 80 ಸಾವಿರ ರೂ ಖರ್ಚಾಗಿದೆ. ಲಾಕ್‌ಡೌನ್‌ನಿಂದ ಉತ್ತಮ ಬೆಲೆ ಸಿಗದೆ, ಕನಿಷ್ಠ ಎರಡು ಲಕ್ಷ ನಷ್ಟ ಆಗಿದೆ ಎಂದು ಅವರು ನೋವು ತೊಡಿಕೊಂಡರು.
ಮಾರುಕಟ್ಟೆಯಲ್ಲಿ ಕೆ.ಜಿ ಕ್ಯಾರೆಟ್‌ಗೆ 20-30 ರೂ ಇರುತ್ತಿತ್ತು. ಆದರೆ ಈಗ 4-5 ರೂ.ಗಳಿಗೆ ಕುಸಿದಿದೆ. ಕ್ಯಾರೆಟ್ ಅನ್ನು ಕೂಲಿಕಾರರಿಂದ ಕೀಳಿಸಿ ಮಾರುಕಟ್ಟೆಗೆ ಸಾಗಿಸಲು ಕೆ.ಜಿಗೆ 8 ರಿಂದ 9 ರೂ ಖರ್ಚಾಗುತ್ತದೆ. ಮಾರುಕಟ್ಟೆಯಲ್ಲಿ 4-5 ರೂ.ಗಳಿಗೆ ಮಾರಾಟವಾದರೆ ಕೂಲಿ, ವಾಹನದ ವೆಚ್ಚವನ್ನು ರೈತನೇ ಭರಿಸಬೇಕಾಗಿದೆ. ರೈತ ಬೆಳೆದಿರುವ ಫಸಲನ್ನು ಕಟಾವು ಮಾಡದೇ ಬೆಳೆದ ಕ್ಯಾರೆಟ್ ಜಮೀನಿನಲ್ಲೆ ಕೊಳೆಯುತ್ತಿರುವುದನ್ನು ನೋಡಲಾಗದ ಪರಿತಪಿಸುವಂತಾಗಿದೆ.