ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ ಅವರು ಗುಳೇದಗುಡ್ಡ ತಾಲೂಕಿನ ಮಂಗಳಗುಡ್ಡ ಗ್ರಾಪಂ ವ್ಯಾಪ್ತಿಯ ಚಿಮ್ಮಲಗಿ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಸಾರ್ವಜನಿಕರ ಕುಡಿಯುವ ನೀರಿನ ಟ್ಯಾಂಕ್ಗಳ ಸ್ವಚ್ಛತೆಯಲ್ಲಿ ವೈಫಲ್ಯ, ಆಶ್ರಯ ಮನೆಗಳಿಗೆ ಫಲಾನುಭವಿಗಳಿಗೆ ಹಣವು ಸಂದಾಯವಾಗದಿರುವ ಕುರಿತು ಗ್ರಾಮಸ್ಥರು ದೂರು ಸಲ್ಲಿಸಿದರು.
ಎಂಜಿಎನ್‌ಆರ್‌ಇಜಿ ಯೋಜನೆ ಅಡಿ ಕಡತಗಳನ್ನು ಪರಿಶೀಲಿಸಿದ ಅವರು, ಆಡಳಿತಾತ್ಮಕ, ತಾಂತ್ರಿಕ ಅನುಮೋದನೆ ಇಲ್ಲದೇ ಕಾಮಗಾರಿ ಅನುಷ್ಠಾನ ಆಗದಿರುವುದು, ಅಭಿಯಂತರರ ಸಹಿ ಇರದಿರುವುದು ಸೇರಿದಂತೆ ಹಲವು ದೋಷಗಳು ಕಂಡು ಬಂದವು. 14ನೇ ಹಣಕಾಸಿನ ಅಡಿಯ ಕಡತಗಳು ಅಪೂರ್ಣವಾಗಿವೆ. ದೋಷಾರೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಪಂ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒಗೆ ಸೂಚಿಸಲಾಗುವುದು ಎಂದರು.