ಬಾಗಲಕೋಟೆ: ಗಣೇಶ ಹಬ್ಬದ ಮರುದಿನ ಇಲಿವಾರ ಎಂದು ವಿಶೇಷ ಪೂಜೆ, ಪುನಸ್ಕಾರ ಮಾಡಲಾಗುತ್ತದೆ. ಇಂತಹ ಇಲಿ ವಾರ ದಿನದಂದು ಜಿಲ್ಲೆಯ ನೇಕಾರರು ತಮ್ಮ ಕೆಲಸ ಕಾರ್ಯಗಳನ್ನು ಸಂಪೂರ್ಣ ವಿರಾಮ ನೀಡಿರುತ್ತಾರೆ.
ಬೆಲ್ಲದ ಇಲಿಯನ್ನು ಮಾಡಿ, ಅದಕ್ಕೆ ಕಡಬು, ಹೋಳಿಗೆ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ನೂಲಿಗೆ ಸಂಬಂಧಿಸಿದ ಕೆಲಸ ಕೈಗೆತ್ತಿಕೊಂಡರೆ, ಇಲಿಗಳು ನೂಲನ್ನು ಹಾಳು ಮಾಡುತ್ತವೆ ಎಂಬ ನಂಬಿಕೆ ಇವರದ್ದಾಗಿದೆ.
ವಂಶ ಪರಂಪರೆಯಾಗಿ ನೇಕಾರರು ಈ ಪದ್ಧತಿ ಆಚರಿಸಿಕೊಂಡು ಬಂದಿದ್ದು, ಕೈ ಮಗ್ಗ, ವಿದ್ಯುತ್ ಮಗ್ಗಗಳು ಇರುವ ಇಲಕಲ್ಲ, ರಬಕವಿ-ಬನಹಟ್ಟಿ, ಗುಳೇದಗುಡ್ಡ, ಕಮತಗಿ ಸೇರಿದಂತೆ ಇಡೀ ಜಿಲ್ಲೆಯಲ್ಲಿರುವ ನೇಕಾರರು ತಮ್ಮ ಉದ್ಯೋಗವನ್ನು ಇಂದು ಸಂಪೂರ್ಣ ಬಂದ್ ಮಾಡಿದ್ದಾರೆ.
ಯಾವುದೇ ಕಾಟ ಕೊಡಬೇಡ, ನೂಲನ್ನು ಹಾಳು ಮಾಡಬೇಡ ಎಂದು ಭಕ್ತಿಯಿಂದ ಈ ದಿನ ಬೇಡಿಕೊಳ್ಳಲಾಗುತ್ತದೆ. ಇಷ್ಟೇ ಅಲ್ಲ ಬಟ್ಟೆ ಮಳಿಗೆಗಳು ಸಹ ಇಂದು ತೆರೆದಿರುವುದಿಲ್ಲ.
ಎಸ್ಎಸ್ಕೆ ಸಮಾಜದ ಬಾಂಧವರು ಶ್ರಾವಣ ಮಾಸದಿಂದ ಮಾಂಸಹಾರ ತ್ಯಜಿಸಿ, ಇಂದು ನೈವೇದ್ಯವಾಗಿ ಮಾಂಸಹಾರ ತಯಾರಿಸಿ, ನಂತರ ಊಟ ಮಾಡುವ ಮೂಲಕ ಇಲಿಯವಾರ ಆಚರಣೆ ಮಾಡುವುದು ವಿಶೇಷ.