ಬಾಗಲಕೋಟೆ : ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಮತ್ತು ಮಳೆಯಿಂದಾಗಿ ಹಾನಿಗೊಳಗಾದ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ, ರಸ್ತೆ ಹಾಗೂ ಮನೆಗಳ ಸಮೀಕ್ಷೆ ಕಾರ್ಯ ಚುರುಕುಗೊಳಿಸಿ ತುರ್ತಾಗಿ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶಿವಯೋಗಿ ಕಳಸ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಭವನದಲ್ಲಿಂದು ಜರುಗಿದ ಮತದಾರ ಪಟ್ಟಿ ಪರಿಷ್ಕರಣೆ, ಕೋವಿಡ್ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಿಂದ ರೈತರು ಬೆಳೆದ ಬೆಳೆ ಹಾಳಾಗಿದ್ದು, ಅದರ ಸಮೀಕ್ಷೆ ಚುರುಕುಗೊಳಿಸಿ ವರದಿ ಸಲ್ಲಿಸಬೇಕು. ಆಗ ರೈತರಿಗೆ ಪರಿಹಾರ ಬೇಗನೆ ದೊರೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಅಧಿಕಾರಿಗಳು ಮುತುವರ್ಜಿ ವಹಿಸಿ ಸಮೀಕ್ಷೆ ವರದಿಯನ್ನು ನೀಡಲು ತಿಳಿಸಿದರು.
ಆಗಸ್ಟ್ ತಿಂಗಳಲ್ಲಿ ಕೃಷಿ 2,24,773 ಹೆಕ್ಟೇರ್, ತೋಟಗಾರಿಕೆ 12,388 ಹೆಕ್ಟೇರ್, ರೇಷ್ಮೆ 8.4 ಹೆಕ್ಟೇರ್ ಸೇರಿ ಒಟ್ಟು 34,869 ಹೆಕ್ಟೇರ್ ರಷ್ಟು ಬೆಳೆ ಹಾನಿಯಾದರೆ, ಸೆಪ್ಟೆಂಬರ್ ತಿಂಗಳಲ್ಲಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಬೆಳೆ ಸೇರಿ ಒಟ್ಟು 20,779 ಹೆಕ್ಟೇರ್ ರಷ್ಟು ಹಾನಿಯಾಗಿದೆ. ಅದೇ ರೀತಿ ಮಳೆಯಿಂದ ಆಗಸ್ಟ್ ದಿಂದ ಸೆಪ್ಟೆಂಬರ್ 13 ವರೆಗೆ ಒಟ್ಟು 469 ಮನೆಗಳು ಹಾನಿಗೊಳಗಾಗಿವೆ. ಸೆಪ್ಟೆಂಬರ್ 14ರ ನಂತರ 1869 ಮನೆಗಳಿ ಹಾನಿಗೊಳಗಾಗಿವೆ. ಆದ್ದರಿಂದ ಬಾಕಿ ಹಾನಿಯ ವಿವರವನ್ನು ತುರ್ತಾಗಿ ನೀಡುವಂತೆ ಉಸ್ತುವಾರಿ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ, ಹಾನಿಯ ಸಮೀಕ್ಷೆ ಕಾರ್ಯವನ್ನು ವಾರದೊಳಗೆ ಪೂರ್ಣಗೊಳಿಸಲು ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ಎರಡು ದಿನಗಳಲ್ಲಿ ಸುರಿದ ಮಳೆಗೂ ಸಹ ಮಣ್ಣಿನ ಮನೆಗಳು ಬಿದ್ದಿದ್ದು, ಜಂಟಿ ಸಮೀಕ್ಷೆಯ ಕಾರ್ಯ ಕೈಗೊಂಡ ಪರಿಹಾರ ತಂತ್ರಾಂಶದಲ್ಲಿ ಎಂಟ್ರಿ ಮಾಡಬೇಕು. ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಬೀಜ ಮತ್ತು ಗೊಬ್ಬರದ ಸಮಸ್ಯೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ನಿಯಂತ್ರಣ ಕಾರ್ಯ ನಡೆದಿದ್ದು, ಆಕ್ಸಿಜನ್ ಕೊರತೆ ಇರುವುದಿಲ್ಲ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಸೂಲಾತಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಂತರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮತ್ತು ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಅನುದಾನದಡಿ ಕೈಗೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಯಶವಂತ ಗುರಿಕಾರ, ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.