ಬಾಗಲಕೋಟೆ: ಜಿಲ್ಲೆಯಲ್ಲಿನ ತೊಗರಿ ಬೆಳೆಗೆ ಮರುಕ, ಕಾಯಿ ಕೊರೆಯುವ ಕೀಟ, ಹೆಲಿಕೋವರ್ಪಾ ಆರ್ಮಿಜೆರ, ಕಾಯಿನೋಣ ಮತ್ತು ರಸ ಹೀರುವ ಕೀಟಗಳ ಬಾಧೆ ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿಯಾಗುವ ಲಕ್ಷಣಗಳಿವೆ. ರೈತರು ಈ ಕೀಟಗಳ ಹತೋಟಿಗೆ ಸರಿಯಾದ ಸಮಯದಲ್ಲಿ ಕ್ರಮ ಕೈಗೊಂಡರೆ ತಮ್ಮ ಬೆಳೆಗಳನ್ನು ರಕ್ಷಿಸಬಹುದಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.
ಚುಕ್ಕೆ ಕಾಯಿ ಕೊರಕ : ಇತ್ತೀಚಿನ ದಿನಗಳಲ್ಲಿ ತೊಗರಿಯ ಮೇಲೆ ಚುಕ್ಕೆ ಕಾಯಿ ಕೊರಕ ಹೆಚ್ಚಾಗಿ ಕಂಡು ಬರುತ್ತಿದ್ದು, ನಿಯಂತ್ರಣ ಕಷ್ಟಸಾಧ್ಯವಾಗುತ್ತಿದೆ. ಪ್ರೌಢ ಚಿಟ್ಟೆಯು ಕುಡಿ, ಮೊಗ್ಗು ಮತ್ತು ಎಲೆಗಳ ಮೇಲೆ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳಿಂದ ಬಂದ ಮರಿ ಹುಳುಗಳು ಮೊಗ್ಗು, ಕಾಯಿ ಮತ್ತು ಎಲೆಗಳನ್ನು ಕೂಡಿಸಿ ಬಲೆಯನ್ನು ಕಟ್ಟುತ್ತದೆ. ನಂತರ ಬಲೆಯೊಳಗಿದ್ದು ತಿನ್ನುವುದರಿಂದ ಇಳುವರಿ ಕಡಿಮೆಯಾಗುತ್ತದೆ. ಈ ಕೀಟದ ನಿಯಂತ್ರಣಕ್ಕಾಗಿ ಮಡಚಿದ, ಗುಂಪುಗಟ್ಟಿದ ಜಾಡು ಎಲೆಗಳನ್ನು ಬೆಳೆಯ ಮೇಲಿಂದ ಬಿಡಿಸಬೇಕು. ಬೆಳೆಯು ಮೊಗ್ಗು ಹಾಗೂ ಹೂವು ಬಿಡುವ ಸಮಯದಲ್ಲಿದ್ದಾಗ ಪ್ರತಿ ಲೀಟರ್ ನೀರಿಗೆ 2.0 ಮಿ.ಲೀ ಪ್ರೋಪೆನೋಪಾಸ್, 50 ಇ.ಸಿ ಅಥವಾ 1 ಗ್ರಾಂ ಅಸಿಫೇಟ್ ಸಿಂಪಡಿಸಬೇಕು.
ಹಸಿರು ಕಾಯಿ ಕೊರಕ (ಹೆಲಿಕೋವರ್ಪಾ ಆರ್ಮಿಜೆರ)
ಮೊದಲನೇ ಕೀಟನಾಶಕದ ಸಿಂಪಡಣೆ: ಪ್ರತಿಶತ 25-50ರಷ್ಟು ಹೂ ಬಿಡುವಾಗ ಪ್ರತಿ ಗಿಡದಲ್ಲಿ ಎರಡು ತತ್ತಿ ಅಥವಾ ಒಂದು ಕೀಟ ಕಾಣಿಸಿಕೊಂಡರೆ ಮೊದಲನೇ ಸಿಂಪಡಣೆಯಾಗಿ ತತ್ತಿ ಕೀಟನಾಶಕಗಳಾದ 50 ಗ್ರಾಂ ಪ್ರೊಫೆನೋಸಾನ್, 2 ಮಿ.ಲೀ ಇ.ಸಿ, 0.6 ಗ್ರಾಂ ಮಿಥೊಮಿಲ್ ಅಥವಾ 0.6 ಗ್ರಾಂ ಥಯೋಡಿಕಾರ್ಬ 75 ಡಬ್ಲು ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಎರಡನೇ ಸಿಂಪಡಣೆ: ಪ್ರತಿ ಲೀಟರ್ ನೀರಿಗೆ ಶೇ. 5ರಷ್ಟು ಬೇವಿನ ಬೀಜದ ಕಷಾಯ ಅಥವಾ ಮೆನಸಿನಕಾಯಿ (0.5%) & ಬೆಳ್ಳುಳ್ಳಿ (0.25%) ಕಷಾಯ ಬಳಸಬೇಕು. ಬೇವಿನ ಬೀಜದ ಲಭ್ಯತೆ ಇಲ್ಲದಿದ್ದರೆ, ಬೇವಿನ ಕೀಟನಾಶಕಗಳನ್ನು ಪ್ರತಿ ಲೀ ನೀರಿಗೆ 3 ಮಿ.ಲೀ ಅಂತೆ ಉಪಯೋಗಿಸಬೇಕು.
ಮೂರನೇಯ ಸಿಂಪಡಣೆ : ಹುಳುಗಳ ಬಾಧೆ ಮತ್ತು ಸಂಖ್ಯೆ ಹೆಚ್ಚಾಗಿರುವ ಸಮಯದಲ್ಲಿ ಕೀಟನಾಶಕಗಳಾದ ಇಮಾಮೆಕ್ಟಿನ್ ಬೆಂಜೋಯೆಟ್ 0.3 ಗ್ರಾಂ, 5 ಎಸ್ಜಿ ಅಥವಾ 0.15 ಮಿ.ಲೀ ಕ್ಲೋರಾಂಟ್ರನಿಲಿಪ್ರೋಲ್ , 18.5 ಎಸ್.ಸಿ ಅಥವಾ 0.2 ಗ್ರಾಂ ಪ್ಲೊಬೆಂಡಿಯಾಮೈಡ್ 20 ಡಬ್ಲೂ.ಜಿ ಅಥವಾ 0.75 ಮಿ.ಲೀ ನೊವಲ್ಯುರಾನ್, 10 ಇ.ಸಿ ಅಥವಾ 0.1 ಮಿ.ಲೀ ಸ್ಪೈನೋಸಾಡ್ , 45 ಎಸ್.ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಕಾಯಿ ನೊಣ: ಕಡಿಮೆ ಅವಧಿ ಇರುವ ತಳಿಗಳನ್ನು ಆಯ್ಕೆ ಮಾಡಬೇಕು. ಈ ಕೀಟದ ನಿರ್ವಹಣೆಗಾಗಿ ಬೆಳೆಯು ಕಾಯಿಕಟ್ಟುವ ಹಂತದಲ್ಲಿ 0.2 ಮಿ.ಲೀ ಇಮಿಡಾಕ್ಲೋಪ್ರಿಡ್, 17.8 ಎಸ್.ಎಲ್ +1 % ಬೆಲ್ಲದ ದ್ರಾವಣ ಅಥವಾ 0.2 ಮಿ.ಲೀ ಥೈಯೋಮಿಥಾಕ್ಸಾಮ್, 25 ಡಬ್ಲೂ.ಜಿ + 1 % ಬೆಲ್ಲದ ದ್ರಾವಣ ಅಥವಾ 1 ಗ್ರಾಂ ಅಸಿಫೇಟ್ 75 ಎಸ್.ಪಿ ಅಥವಾ 0.25 ಗ್ರಾಂ ಅಸಿಟಾಮಿಪ್ರಿಡ್, 20 ಎಸ್.ಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ರಸ ಹೀರುವ ಕೀಟಗಳು : ತೊಗರಿ ಬೆಳೆಯುವ ಎಲ್ಲ ಪ್ರದೇಶಗಳಲ್ಲೂ ಜಿಗಿ ಹುಳುಗಳ ಬಾಧೆ ಕಂಡು ಬಂದರೂ ಇಳುವರಿಯಲ್ಲಿ ಅಷ್ಟೇನೂ ನಷ್ಟವಾಗಿರುವ ವರದಿಗಳಿಲ್ಲ. ನುರಿತ ಕೀಟ ತಜ್ಞರು ಮಾತ್ರ ಅವುಗಳನ್ನು ಗುರುತಿಸಬಲ್ಲರು. ಈ ಕೀಟಗಳು ತೊಗರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಾಗ ಹೆಚ್ಚಿನ ಹಾನಿ ಉಂಟು ಮಾಡುತ್ತವೆ. ಅಂತಹ ಸನ್ನಿವೇಶದಲ್ಲಿ ಅಂತರವ್ಯಾಪಿ ಕೀಟನಾಶಕಗಳಾದ 0.2 ಮಿ.ಲೀ ಥೈಯೋಮಿಥಾಕ್ಸಾಮ್, 25 ಡಬ್ಲೂ.ಜಿ ಅಥವಾ ಅಸಿಫೇಟ್ 1 ಗ್ರಾಂ. ಅಥವಾ ಅಸಿಟಾಮಾಪ್ರಿಡ್ 0.33 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.