ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವನ್ನಪ್ಪಿ ಇಂದಿಗೆ ಒಂದು ವರ್ಷ ಸಂದಿದೆ. ಆನೆಯ ಮಾವುತರಾಗಿದ್ದ ದೊಡ್ಡ ಮಾಸ್ತಿ ಅವರ ಪುತ್ರ ಮಹೇಶ್ ಮತ್ತು ಸೊಸೆ ರಾಣಿ ಅವರು ಅರ್ಜುನನ ಜೊತೆಗಿನ ಒಡನಾಟವನ್ನು 'ಈಟಿವಿ ಭಾರತ್' ಜೊತೆಗೆ ಹಂಚಿಕೊಂಡರು.
ಮಹೇಶ್(ಸಣ್ಣಪ್ಪ) ಮಾತನಾಡಿ, "ಇಂದು ಅರ್ಜುನನ ಒಂದು ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದುಃಖವಾಯಿತು. ಅರ್ಜುನ ತುಂಬಾ ತುಂಟನಾಗಿದ್ದ. ಅವನೊಂದಿಗೆ ಕಾಡಿಗೆ ಸೊಪ್ಪು ತರಲು ಹೋಗುತ್ತಿದ್ದೆವು. ಅರ್ಜುನ ಸಾಮಾನ್ಯ ಆನೆ ಅಲ್ಲ. ನನ್ನನ್ನು ಕೂರಿಸಿಕೊಂಡು ದೈತ್ಯ ಮತ್ತು ಮದವೇರಿದ ಕಾಡಾನೆಗಳ ಜೊತೆ ಅರ್ಧ, ಮುಕ್ಕಾಲು ಗಂಟೆ ಧೈರ್ಯವಾಗಿ ಕಾದಾಡುತ್ತಿದ್ದ" ಎಂದು ನೆನೆದರು.
"ಇಂಥ ಧೈರ್ಯವಂತ ಅರ್ಜುನ ಒಂಟಿ ಸಲಗದ ಜೊತೆಗಿನ ಸೆಣಸಾಟದಲ್ಲಿ ಸೋತು ಸಾವನ್ನಪ್ಪಿರುವುದು ಅಚ್ಚರಿ ತರಿಸಿತು. ಅಂದು ಘಟನಾ ಸ್ಥಳದಲ್ಲಿ ನಾನಿರಲಿಲ್ಲ. ಅರ್ಜುನ ಮೃತಪಟ್ಟ ಎಂದಾಗ ನಾನು ತಮಾಷೆ ಅಂದುಕೊಂಡಿದ್ದೆ. ನಂತರ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಬಹಳ ನೋವಾಯಿತು. ನನ್ನ ತಂದೆ ಅರ್ಜುನನ್ನು ಪಳಗಿಸಿದ್ದರು. 2012ರಲ್ಲಿ ನಾನು ಮತ್ತು ನನ್ನ ತಂದೆ ದಸರಾದಲ್ಲಿ ಮೊದಲನೇ ಬಾರಿಗೆ ಅರ್ಜುನನಿಗೆ ಮಾವುತ ಮತ್ತು ಕವಾಡಿಗರಾಗಿ ಭಾಗವಹಿಸಿದ್ದೆವು. ತಂದೆ 2016ರಲ್ಲಿ ನಿಧನರಾದರು. 2017ರಲ್ಲಿ ನನ್ನನ್ನು ಬೇರೆ ಆನೆ ಶಿಬಿರಕ್ಕೆ ವರ್ಗಾವಣೆ ಮಾಡಿದರು" ಎಂದು ಸ್ಮರಿಸಿದರು.
![ಅರ್ಜುನ ಆನೆ](https://etvbharatimages.akamaized.net/etvbharat/prod-images/04-12-2024/ka-mys-02-04-12-2024-arjuna-ane-kavadi-story-7208092_04122024144225_0412f_1733303545_760.jpeg)
'ಅಂದು ಅರ್ಜುನನ ಜೊತೆ ವಿನು ಇದ್ದಿದ್ದರೆ..': ಮಹೇಶ್ ಅವರ ಪತ್ನಿ ರಾಣಿ ಮಾತನಾಡಿ, "ಅರ್ಜುನನಿಗೆ ನಮ್ಮ ಮನೆಯಲ್ಲಿ ಮುದ್ದೆ ಮಾಡಿ ಉಣಬಡಿಸುತ್ತಿದ್ದೆ. ಅದನ್ನು ತಿಂದು ಅರ್ಜುನ ಆನೆ ಶಿಬಿರಕ್ಕೆ ಹೋಗುತ್ತಿದ್ದ. ನಮ್ಮ ಮತ್ತು ಅರ್ಜುನನ ನಡುವೆ ಅವಿನಾಭಾವ ಸಂಬಂಧವಿತ್ತು. ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆವು. ನನ್ನ ಪತಿ ಮತ್ತು ನಾನು ಅರ್ಜುನನ ಜೊತೆ ಸೊಪ್ಪು ತರಲು ಕಾಡಿಗೆ ಹೋಗುತ್ತಿದ್ದೆವು. ಆ ವೇಳೆ ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ, ಮರಳಿ ಕರೆತರುತ್ತಿದ್ದ" ಎಂದು ನೆನೆದು ಕಣ್ಣೀರು ಹಾಕಿದರು.
ಅರ್ಜುನ ಆನೆಯ ಕುರಿತು..: ಅರ್ಜುನ ಆನೆಯನ್ನು 1968ರಲ್ಲಿ ಮೈಸೂರು ಜಿಲ್ಲೆಯ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಸುಮಾರು 22 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ 64 ವರ್ಷದ ಆನೆ ಭಾಗವಹಿಸಿತ್ತು. 2023ರಲ್ಲಿ ಕೊನೆಯ ಬಾರಿಗೆ ದಸರಾದಲ್ಲಿ ಭಾಗವಹಿಸಿದ್ದ. ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹೆಚ್.ಡಿ.ಕೋಟೆಯ ಬಳ್ಳೆ ಆನೆ ಶಿಬಿರದಲ್ಲಿ ನೆಲೆಸಿದ್ದ ಅರ್ಜುನ, ಹುಲಿ, ಆನೆ ಸೆರೆ ಕಾರ್ಯಾಚರಣೆಯಲ್ಲಿ ವಿಶೇಷ ಪಾತ್ರವಹಿಸಿದ್ದ.
![ಅರ್ಜುನ ಆನೆ](https://etvbharatimages.akamaized.net/etvbharat/prod-images/04-12-2024/ka-mys-02-04-12-2024-arjuna-ane-kavadi-story-7208092_04122024144225_0412f_1733303545_451.jpeg)
ಅರ್ಜುನನ ವೀರಮರಣ: 2023ರ ಡಿಸೆಂಬರ್ 4ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಒಂಟಿ ಸಲಗದ ದಾಳಿಗೆ ತುತ್ತಾಗಿ ಅರ್ಜುನ ವೀರಮರಣ ಹೊಂದಿದ್ದ.
![ಅರ್ಜುನ ಆನೆ ತ್ರಿಡಿ ಪೇಂಟಿಂಗ್](https://etvbharatimages.akamaized.net/etvbharat/prod-images/04-12-2024/ka-mys-02-04-12-2024-arjuna-ane-kavadi-story-7208092_04122024144225_0412f_1733303545_346.jpeg)
ಇನ್ನೂ ಮುಗಿಯದ ಸ್ಮಾರಕ ನಿರ್ಮಾಣ ಕಾರ್ಯ: ಅರ್ಜುನ ಮೃತಪಟ್ಟ ಸ್ಥಳವಾದ ಸಕಲೇಶಪುರ ತಾಲೂಕಿನ ಯಸಳೂರಿನಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದ್ದು, ಒಂದು ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಬಳ್ಳೆ ಆನೆ ಶಿಬಿರದಲ್ಲೂ ಆನೆಯ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ.
ಇದನ್ನೂ ಓದಿ: ಅರಣ್ಯ ಕಾವಲಿಗೆ ಬಂಡೀಪುರದಲ್ಲಿ ದೇಶದ ಮೊದಲ ಶ್ವಾನ ತರಬೇತಿ ಕೇಂದ್ರ ಆರಂಭ