ಬಾಗಲಕೋಟೆ: ಜಿಲ್ಲೆಯ ಇಳಕಲ್ ಸೀರೆಗಳು, ಕಾಟನ್ ಸೀರೆಗಳು ರಾಜ್ಯದಲ್ಲಷ್ಟೇ ಅಲ್ಲ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ. ವಂಶಪಾರಂಪರ್ಯವಾಗಿ ಸೀರೆ ನೇಯುವುದನ್ನೇ ಉದ್ಯೋಗವಾಗಿಸಿಕೊಂಡು ಬಂದಿರುವ ಇಲ್ಲಿನ ಕೆಲವು ನೇಕಾರರು ಸಾಂಪ್ರದಾಯಿಕ ಸೀರೆಗಳಿಗೆ ಫ್ಯಾಶನ್ ಡಿಸೈನ್ ಮೂಲಕ ಆಧುನಿಕ ಟಚ್ ಕೊಡಲು ಮುಂದಾಗಿದ್ದಾರೆ.
ಇಳಕಲ್ ಪಟ್ಟಣ, ಅಮೀನಗಡ, ಕಮತಗಿ ಹಾಗೂ ಗುಳೇದಗುಡ್ಡ ಪಟ್ಟಣದಲ್ಲಿ ಕೈಮಗ್ಗ ನೇಕಾರರು ಹೆಚ್ಚಾಗಿದ್ದಾರೆ. ಕೊರೊನಾದಿಂದ ನೇಕಾರಿಕೆ ಉದ್ಯೋಗಕ್ಕೆ ಹೊಡೆತ ಬಿದ್ದ ಪರಿಣಾಮ ನೇಯ್ಗೆಯಲ್ಲಿ ಫ್ಯಾಶನ್ ಡಿಸೈನ್ಗೆ ಒತ್ತು ಕೊಟ್ಟರೆ ಹೆಚ್ಚು ಲಾಭಗಳಿಸಬಹುದು ಎಂಬುದನ್ನು ಕೆಲವು ನೇಕಾರ ಕುಟುಂಬಗಳು ಕಂಡುಕೊಂಡಿವೆ. ಹೀಗಾಗಿ ಕಮತಗಿ ಗ್ರಾಮದ 9 ಕುಟುಂಬಗಳ ಕೈಮಗ್ಗ ನೇಕಾರರು ಸೇರಿಕೊಂಡು, ಇಳಕಲ್ ಹಾಗೂ ಕಾಟನ್ ಸೀರೆಯಲ್ಲಿ ನೂತನ ಡಿಸೈನ್ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.
ಕೆಲವರು ಗುಜರಾತ್ನಿಂದ ಡಿಸೈನಿಂಗ್ ತರಬೇತಿ ಪಡೆದುಕೊಂಡು ಬಂದಿದ್ದು, ಸೀರೆ ಸೇರಿದಂತೆ ರುಮಾಲು, ವೇಲ್ ನಲ್ಲಿ ಹೊಸ ಹೊಸ ಬಗೆಯ ವಿನ್ಯಾಸ ಮಾಡುತ್ತಿದ್ದಾರೆ. ಇವುಗಳನ್ನು ಬೆಂಗಳೂರು, ಬಾಂಬೆ, ಹೈದ್ರಾಬಾದ್, ಗುಜರಾತ್ ಹಾಗೂ ದೆಹಲಿಯಂತಹ ಬೃಹತ್ ಪಟ್ಟಣಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹೆಚ್ಚು ಲಾಭ ಗಳಿಸುತ್ತಾರೆ. ಒಂದು ರೇಷ್ಮೆ ಸೀರೆ 5 ಸಾವಿರದಿಂದ 8 ಸಾವಿರದವರೆಗೆ ಮಾರಾಟ ಆಗುತ್ತಿದೆ. ಇನ್ನು ರುಮಾಲು, ವೇಲ್ಗಳನ್ನು ಒಂದು ಸಾವಿರದಿಂದ ಎರಡು ಸಾವಿರ ರೂ. ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ನೇಕಾರಿಕೆಯಲ್ಲಿ ತಂತ್ರಜ್ಞಾನ, ನೂತನ ವಿನ್ಯಾಸ ಬೆಳೆಸಿಕೊಂಡಲ್ಲಿ, ಆರ್ಥಿಕವಾಗಿ ಸದೃಢರಾಗಬಹುದು. ಆದರೆ ಇಲ್ಲಿನ ಜನತೆ ಮಾತ್ರ ಹಿಂದಿನ ಕಾಲದ ಸೀರೆಗಳನ್ನು ಮಾತ್ರ ನೇಯುತ್ತಾರೆ. ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ಎಲ್ಲ ನೇಕಾರರು ಮೂಲ ನೇಕಾರಿಗೆ ಜೊತೆ ಆಧುನಿಕ ವಿನ್ಯಾಸಗಳನ್ನು ಅಳವಡಿಕೊಂಡರೆ ಮತ್ತಷ್ಟು ಯಶಸ್ಸು ಸಾಧಿಸಬಹುದು ಎಂದು ಹೊಸ ವಿನ್ಯಾಸ ಮಾಡುತ್ತಿರುವ ಕುಟುಂಬದವರು ಹೇಳುತ್ತಾರೆ.
ಇನ್ನು ಜವಳಿ ಇಲಾಖೆ ಸೇರಿ ಸರ್ಕಾರ ನೇಕಾರರಿಗೆ ಸಾಕಷ್ಟು ತರಬೇತಿ ಸೌಲಭ್ಯಗಳ ಅವಕಾಶ ನೀಡಿದೆ. ಅವುಗಳನ್ನೂ ಸದುಪಯೋಗ ಪಡಿಸಿಕೊಂಡು ನೇಕಾರರು ಆರ್ಥಿಕವಾಗಿ ಸದೃಢರಾಗಬೇಕಾಗಿದೆ.