ಬಾಗಲಕೋಟೆ: ಹತ್ತು ವರ್ಷಗಳಿಂದ ರೈತರ ಕಬ್ಬಿನ ಹಣ ಬಾಕಿ ಉಳಿಸಿಕೊಂಡಿರುವ ಕೇದಾರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಸಮೀಪವಿರುವ ಕೇದಾರನಾಥ ಸಕ್ಕರೆ ಕಾರ್ಖಾನೆಗೆ 2010-11ರಲ್ಲಿ ಕಬ್ಬು ಪೂರೈಸಿದ ರೈತರಿಗೆ 15 ಕೋಟಿ ಬಾಕಿ ಬಿಲ್ ಕೊಡಬೇಕಿದೆ. ಕಾರಣಾಂತರಗಳಿಂದ ಕಾರ್ಖಾನೆ ಬಂದ್ ಆಗಿತ್ತು. ಈಚೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಒಡೆತನ ಸಂಸ್ಥೆಯೊಂದು ಕೇದಾರನಾಥ ಸಕ್ಕರೆ ಕಾರ್ಖಾನೆ ಲೀಜ್ಗೆ ಪಡೆದು ಮತ್ತೆ ಪುನಾರಂಭಿಸುವುದಕ್ಕೆ ಮುಂದಾಗಿದೆ. ಈ ವಿಷಯ ತಿಳಿದ ರೈತರು ಬಾಕಿ ಹಣ ಪಾವತಿಸದೆ ಕಾರ್ಖಾನೆಯನ್ನ ಹೇಗೆ ಲೀಜ್ಗೆ ಕೊಡಲಾಯಿತು ಎಂದು ಜಿಲ್ಲಾಡಳಿತವನ್ನ ಪ್ರಶ್ನಿಸಿದ್ದು, ರೈತರ ಕಬ್ಬಿನ ಬಾಕಿ ಪಾವತಿಯಾಗದೇ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಅವಕಾಶ ಕೊಡಬಾರದೆಂದು ಪಟ್ಟು ಹಿಡಿದಿದ್ದಾರೆ.
ಕೇದಾರನಾಥ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಜಮಾವಣೆಗೊಂಡ ರೈತರು, ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸುವಂತೆ ಪಟ್ಟು ಹಿಡಿದಿದ್ದಾರೆ. ಜೊತೆಗೆ ಬಾಕಿ ಪಾವತಿಯಾಗದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.