ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಖಾತೆಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಐಪಿಎಲ್, ಅಂತಾರಾಷ್ಟ್ರೀಯ ಸೇರಿ ಎಲ್ಲ ಮಾದರಿಯ ಟಿ20 ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಈ ಗೌರವ ಪಡೆದ ಭಾರತದ ಮೊದಲ ಆಟಗಾರ ಎಂದೆನಿಸಿಕೊಂಡರು.
2007 ರಲ್ಲಿ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ವಿರಾಟ್ ಈ ಸ್ವರೂಪದಲ್ಲಿ ಹಲವು ದಾಖಲೆ ಸೃಷ್ಟಿಸಿದ್ದಾರೆ. ಐಪಿಎಲ್, ಅಂತಾರಾಷ್ಟ್ರೀಯ ಸೇರಿದಂತೆ ಎಲ್ಲ ಮಾದರಿಯ ಟಿ20ಯ 362 ಪಂದ್ಯಗಳಲ್ಲಿ 41.11 ಸರಾಸರಿ, 133.17 ಸ್ಟ್ರೈಕ್ರೇಟ್ನೊಂದಿಗೆ 11,429 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕಗಳು ಮತ್ತು 86 ಅರ್ಧ ಶತಕಗಳನ್ನು ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ. ಔಟಾಗದೇ 122 ಅವರ ಅತ್ಯುತ್ತಮ ಸ್ಕೋರ್ ಆಗಿದೆ.
ಇನ್ನು ಗಮನಾರ್ಹವೆಂದರೆ, ಕಿಂಗ್ ವಿರಾಟ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲಿಗ. ಅವರು 115 ಪಂದ್ಯಗಳ 107 ಇನ್ನಿಂಗ್ಸ್‌ಗಳಲ್ಲಿ 52.73 ಸರಾಸರಿಯೊಂದಿಗೆ 4,008 ರನ್ ಗಳಿಸಿದ್ದಾರೆ. 1 ಶತಕ ಮತ್ತು 37 ಅರ್ಧ ಶತಕಗಳೂ ಇದರಲ್ಲಿವೆ.
ಐಪಿಎಲ್ ದಾಖಲೆ: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ ವಿರಾಟ್ ಆಗಿದ್ದಾರೆ. 226 ಪಂದ್ಯಗಳಲ್ಲಿ 36.69 ಸರಾಸರಿಯಲ್ಲಿ 6,788 ರನ್ ಗಳಿಸಿದ್ದಾರೆ. ಲೀಗ್‌ನಲ್ಲಿ 5 ಶತಕಗಳು ಮತ್ತು 46 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಶಿಖರ್ ಧವನ್ 209 ಪಂದ್ಯಗಳಲ್ಲಿ 6469 ರನ್ ಗಳಿಸಿ 2 ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ 165 ಪಂದ್ಯಗಳಲ್ಲಿ 6039, ಭಾರತ ತಂಡದ ನಾಯಕ ರೋಹಿತ್ ಶರ್ಮಾ 229 ಪಂದ್ಯಗಳಲ್ಲಿ 5901, ಮಾಜಿ ಕ್ರಿಕೆಟಿಗ ಸುರೇಶ್ ರೈನಾ 205 ಮ್ಯಾಚ್ಗಳಲ್ಲಿ 5528 ರನ್ ಗಳಿಸಿದ್ದು ನಂತರದ ಸ್ಥಾನದಲ್ಲಿದ್ದಾರೆ.
ಇನ್ನು, ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಕ್ರಿಸ್ ಗೇಲ್ 463 ಪಂದ್ಯಗಳಲ್ಲಿ 36.22 ರ ಸರಾಸರಿಯಲ್ಲಿ 14,562 ರನ್ ಗಳಿಸಿದ್ದು, ವಿಶ್ವದಲ್ಲಿಯೇ ಅತ್ಯಧಿಕ ರನ್ ಬಾರಿಸಿದ ಆಟಗಾರರಾಗಿದ್ದಾರೆ. ಅವರು 22 ಶತಕಗಳು ಮತ್ತು 88 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಆ ಬಳಿಕ ಪಾಕಿಸ್ತಾನದ ಶೋಯೆಬ್ ಮಲಿಕ್ 510 ಪಂದ್ಯಗಳಲ್ಲಿ 77 ಅರ್ಧಶತಕಗಳೊಂದಿಗೆ 12,528 ರನ್, ವೆಸ್ಟ್ ಇಂಡೀಸ್ ದೈತ್ಯ ಕೀರಾನ್ ಪೊಲಾರ್ಡ್ 625 ಪಂದ್ಯಗಳಲ್ಲಿ 1 ಶತಕ ಮತ್ತು 58 ಅರ್ಧಶತಕಗಳೊಂದಿಗೆ 12,175 ರನ್, ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯರೋನ್ ಫಿಂಚ್ 382 ಪಂದ್ಯಗಳಲ್ಲಿ 11,392 ರನ್ ಗಳಿಸಿದ್ದಾರೆ.
ಸೋಲು ತಪ್ಪಿಸಿಕೊಳ್ಳದ ಆರ್ಸಿಬಿ: ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಖನೌ ಸೂಪರ್ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ 1 ವಿಕೆಟ್ನಿಂದ ಸೋಲು ಕಂಡಿತು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ವಿರಾಟ್ ಕೊಹ್ಲಿ, ನಾಯಕ ಫಾಪ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ವೆಲ್ರ ಅಬ್ಬರ್ ಬ್ಯಾಟಿಂಗ್ನಿಂದ ನಿಗದಿತ 20 ಓವರ್ಗಳಲ್ಲಿ 212 ರನ್ಗಳ ಬೃಹತ್ ಮೊತ್ತ ಗಳಿಸಿತು. ಇದನ್ನು ಬೆನ್ನಟ್ಟಿದ ಎಲ್ಎಸ್ಜಿ ಕೊನೆಯ ಓವರ್ನಲ್ಲಿ ರೋಚಕ ಗೆಲುವು ಸಾಧಿಸಿತು.
ಪಂದ್ಯದಲ್ಲಿ ವಿರಾಟ್ ಕೊಹ್ಲಿ 45 ಎಸೆತಗಳಲ್ಲಿ 61 ರನ್ ಗಳಿಸಿ ರಟ್ಟೆಯರಳಿಸಿದರು. ತಲಾ 4 ಬೌಂಡರಿ, ಸಿಕ್ಸರ್ ಅಟ್ಟಿದರು. ನಾಯಕ ಪ್ಲೆಸಿಸ್ 46 ಎಸೆತಗಳಲ್ಲಿ 79 ರನ್, ಗೆಲ್ನ್ ಮ್ಯಾಕ್ಸ್ವೆಲ್ 59 ರನ್ ಮಾಡಿದರು. ಲಖನೌ ಪರವಾಗಿ ಮಿಂಚಿನ ಬ್ಯಾಟ್ ಮಾಡಿದ ಮಾರ್ಕಸ್ ಸ್ಟೊಯಿನೀಸ್ 65, ನಿಕೋಲಸ್ ಪೂರನ್ 62 ರನ್ ಮಾಡಿ ತಂಡವನ್ನು ಗೆಲ್ಲಿಸಿದರು.
ಓದಿ: ವಿರುಷ್ಕಾ ಮಗಳಿಗೆ ಬೆದರಿಕೆ ಪ್ರಕರಣ: ಹೈದರಾಬಾದ್ ಟೆಕ್ಕಿ ವಿರುದ್ಧದ ಕೇಸ್ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್