ನವದೆಹಲಿ: ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ಪುರುಷರ ತಂಡ ಯುಕೆಗೆ ಪ್ರವಾಸ ಕೈಗೊಂಡರೆ, ಮಹಿಳಾ ತಂಡ ಒಂದು ಟೆಸ್ಟ್ ಮತ್ತು ಸೀಮಿತ ಓವರ್ಗಳ ಸರಣಿಗಾಗಿ ಪುರುಷರ ತಂಡದ ಜೊತೆಯೇ ಇಂಗ್ಲೆಂಡ್ಗೆ ಹಾರಲಿದೆ. ಇದಕ್ಕೂ ಮುನ್ನ ಮಹಿಳಾ ತಂಡದ ಎಲ್ಲಾ ಸದಸ್ಯರಿಗೂ COVID-19 ವ್ಯಾಕ್ಸಿನೇಷನ್‌ನ ಮೊದಲ ಡೋಸ್ ನೀಡಲಾಗಿದೆ.
ಭಾರತದ ಮಹಿಳಾ ಕ್ರಿಕೆಟ್ ತಂಡವು ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗುತ್ತಿದ್ದಂತೆ COVID-19 ವ್ಯಾಕ್ಸಿನೇಷನ್‌ನ ಮೊದಲ ಡೋಸ್ ಪೂರ್ಣಗೊಳಿಸಿದೆ. ಪ್ರಸ್ತುತ ಮಹಿಳಾ ತಂಡ ಮುಂಬೈನಲ್ಲಿ ಕ್ಯಾರೆಂಟೈನ್ಲ್ಲಿದೆ. ಇನ್ನು ಮೊದಲ ಡೋಸ್ಅನ್ನು ಎಲ್ಲಾ ಆಟಗಾರ್ತಿಯರು ಪಡೆದಿದ್ದು, ಎರಡನೇ ಡೋಸ್ಅನ್ನು ಯುಕೆ ಆರೋಗ್ಯ ಇಲಾಖೆಯಿಂದ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
"ಸಂಪೂರ್ಣ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರಿಗೂ ಈಗ ಮೊದಲ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ. ಮೊದಲ ಡೋಸ್ ಪಡೆಯಲು ಕೆಲವೇ ಕೆಲವರು ಬಾಕಿ ಉಳಿದಿದ್ದು, ಅವರಿಗೆ ಗುರುವಾರ ವ್ಯಾಕ್ಸಿನೇಷನ್ ನೀಡಲಾಗಿದೆ. ಎಲ್ಲಾ ಆಟಗಾರ್ತಿಯರಿಗೆ ಕೋವಿಶೀಲ್ಡ್ ನೀಡಲಾಗಿದೆ. ಏಕೆಂದರೆ ಇದು ಇಂಗ್ಲೆಂಡ್‌ನಲ್ಲಿ ಎರಡನೇ ಡೋಸ್ ಪಡೆಯಲು ಸಹಾಯ ಮಾಡುತ್ತದೆ" ಎಂದು ಮೂಲಗಳು ತಿಳಿಸಿವೆ.
ಮಹಿಳಾ ತಂಡವು ಒಂದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಜೂನ್ 16ರಿಂದ ಪ್ರಾರಂಭವಾಗುವ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮೊದಲು ಮುಖಾಮುಖಿಯಾಗಲಿವೆ. ನಂತರ ಉಭಯ ತಂಡಗಳು ಜೂನ್ 27ರಿಂದ ಮೂರು ಏಕದಿನ ಪಂದ್ಯ ಆಡಲಿದ್ದು, ಪಂದ್ಯಗಳು ಬ್ರಿಸ್ಟಲ್, ಟೌಂಟನ್ ಮತ್ತು ವೋರ್ಸೆಸ್ಟರ್‌ನಲ್ಲಿ ನಡೆಯಲಿವೆ.
ಜುಲೈ 9ರಿಂದ ಉಭಯ ತಂಡಗಳು ಮೂರು ಟಿ-20 ಪಂದ್ಯಗಳಲ್ಲಿ ಮುಖಾಮುಖಿಯಾಗಲಿದ್ದು, ಮೂರು ಪಂದ್ಯಗಳು ನಾರ್ಥಾಂಪ್ಟನ್, ಹೋವ್ ಮತ್ತು ಚೆಲ್ಮ್ಸ್ ಫೋರ್ಡ್ಲ್ಲಿ ನಡೆಯಲಿವೆ.
ಭಾರತೀಯ ಪುರುಷರ ತಂಡಕ್ಕೂ ಎರಡನೇ ಡೋಸ್ಅನ್ನು ಯುಕೆ ಆರೋಗ್ಯ ಇಲಾಖೆ ನೀಡಲಿದೆ. ಟೀಮ್ ಇಂಡಿಯಾ ಜೂನ್ 2ರಂದು ಮಹಿಳಾ ತಂಡದೊಂದಿಗೆ ಯುಕೆಗೆ ಹಾರಲಿದೆ. ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಆಡುವ ಮೊದಲು ವಿರಾಟ್ ಕೊಹ್ಲಿ ಪಡೆ ಸೌತಾಂಪ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲಿದೆ.