ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ 16 ರನ್ಗಳಿಂದ ಜಯಿಸಿತು. ಮೂರು ಪಂದ್ಯಗಳಲ್ಲಿ ಭಾರತ 2-0 ಅಂತರದಿಂದ ಸರಣಿ ಗೆದ್ದಿತು. ಈ ಮೂಲಕ ತವರು ನೆಲದಲ್ಲಿ ಹರಿಣಗಳ ವಿರುದ್ಧ ಮೊದಲ ಸರಣಿ ಜಯಿಸಿದ ದಾಖಲೆ ಬರೆಯಿತು.
ಭಾನುವಾರ ಗುವಾಹಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗಿಳಿದ ಟೀಂ ಇಂಡಿಯಾ 238 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಟೀಂ ಇಂಡಿಯಾ ನೀಡಿದ್ದ 238 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತೀವ್ರ ಪ್ರತಿಸ್ಪರ್ಧೆ ನೀಡಿ 3 ವಿಕೆಟ್ ನಷ್ಟಕ್ಕೆ 20 ಓವರ್‌ಗಳಲ್ಲಿ 221 ರನ್ ಗಳಿಸಿ ಸೋಲಿಗೆ ಶರಣಾಯಿತು.
ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್: ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಆರಂಭಿಕ 9.5 ಓವರ್‌ಗಳಲ್ಲಿ 96 ರನ್ ಜೊತೆಯಾಟ ಆಡಿ ಭದ್ರ ಬುನಾದಿ ಹಾಕಿದರು. ರೋಹಿತ್ ಶರ್ಮಾ 37 ಎಸೆತದಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ನೊಂದಿಗೆ 43 ರನ್ ಬಾರಿಸಿ ಔಟಾದರು.
ರಾಹುಲ್ ಆಕರ್ಷಕ ಅರ್ಧ ಶತಕ: ಕೆ.ಎಲ್ ರಾಹುಲ್ ಮೊದಲ ಪಂದ್ಯದ ಫಾರ್ಮ್ ಮುಂದುವರೆಸಿದ್ದು ಆಕರ್ಷಕ ಅರ್ಧ ಶತಕ ಬಾರಿಸಿದರು. ಕ್ರೀಸ್ಗೆ ಬಂದಾಗಿನಿಂದಲೇ ಹೊಡಿಬಡಿ ಆಟಕ್ಕೆ ಇಳಿದ ರಾಹುಲ್ 28 ಎಸೆತದಲ್ಲಿ 5 ಬೌಡರಿ ಮತ್ತು 4 ಸಿಕ್ಸರ್ನಿಂದ 57 ರನ್ ಗಳಿಸಿದರು. 11.3ನೇ ಓವರ್ನಲ್ಲಿ ಮಹರಾಜ್ ಬೌಲಿಂಗಿನಲ್ಲೇ ಎಲ್ಬಿಡಬ್ಲ್ಯೂಗೆ ಬಲಿಯಾದರು.
ಸಾವಿರ ರನ್ ಸರದಾರ ಸೂರ್ಯ: ರೋಹಿತ್ ವಿಕೆಟ್ ನಂತರ ಕೊಹ್ಲಿ ಕ್ರಿಸ್ಗೆ ಬಂದರು. ಕೊಹ್ಲಿ ಜೊತೆ ರಾಹುಲ್ ಹೆಚ್ಚಿನ ಜೊತೆಯಾಟ ನೀಡಲಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್ ಯಾದವ್ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದರು. ಮೈದಾನದ ಅಷ್ಟ ದಿಕ್ಕುಗಳನ್ನೂ ಹರಿಣಗಳ ತಂಡದ ಬೌಲರ್ಗಳಿಗೆ ದರ್ಶಿಸಿದರು. 22 ಬಾಲ್ನಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಯಿಂದ 61 ರನ್ ಗಳಿಸಿದರು. ಟಿ20 ಮಾದರಿಯಲ್ಲಿ 1,000 ದಾಖಲಿಸಿ ಭಾರತ ಮೂರನೇ ಬ್ಯಾಟರ್ ಆಗಿ ಹೊರಹೊಮ್ಮಿದರು. ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ 102 ರನ್ ಜೊತೆಯಾಟವಾಡಿದರು. 61 ರನ್ ಗಳಿಸಿದ್ದ ಯಾದವ್ ರನ್ ಔಟ್ ಆದರು. ಉತ್ತಮ ಆಟ ಪ್ರದರ್ಶಿಸಿದ ವಿರಾಟ್ ಕೊಹ್ಲಿ 49, ದಿನೇಶ್ ಕಾರ್ತಿಕ್ 17 ರನ್ ಗಳಿಸಿ ಅಜೇಯರಾಗಿ ಉಳಿದರು. ದ.ಆಫ್ರಿಕಾ ಪರ ಕೇಶವ್ ಮಹರಾಜ್ 23 ರನ್‌ಗಳಿಗೆ 2 ವಿಕೆಟ್ ಪಡೆದರು.
ಭಾರತೀಯ ಬೌಲರ್ಗಳಿಗೆ ಬೆವರಿಳಿಸಿದ ಮಿಲ್ಲರ್: 238 ರನ್ ಗುರಿ ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ ಒಂದು ರನ್ ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿತು. ನಾಯಕ ಬೌಮಾ ಹಾಗೂ ರೀಲೆ ರುಸ್ಸೋ ಶೂನ್ಯಕ್ಕೆ ಔಟಾಗಿ ತಂಡವನ್ನು ಸೋಲಿನ ಸುಳಿಗೆ ದೂಡಿದರು. ಆದ್ರೆ ಡೇವಿಡ್ ಮಿಲ್ಲರ್ ಶತಕ, ಕ್ವಿಂಟನ್ ಡಿ ಕಾಕ್ ಅರ್ಧ ಶತಕ ಸಿಡಿಸಿ ಭಾರತಕ್ಕೆ ಭಯ ಮೂಡಿಸಿದ್ದರು.
ಕ್ವಿಂಟನ್ ಡಿ ಕಾಕ್ 48 ಬಾಲ್ಗಳಲ್ಲಿ 3 ಬೌಂಡರಿ, 4 ಸಿಕ್ಸರ್ನಿಂದ 69 ರನ್ ಗಳಿಸಿದ್ರೆ, ಮಿಲ್ಲರ್ 47 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ 106 ರನ್ ಸಿಡಿಸಿ ಕೊನೆಯವರೆಗೂ ಹೋರಾಡಿದರು. ಆದ್ರೆ ತಂಡಕ್ಕೆ ಗೆಲುವಿನ ಸಿಹಿ ನೀಡಲು ಸಾಧ್ಯವಾಗಲಿಲ್ಲ. ಐಡೆನ್ ಮಾರ್ಕ್ರಮ್ 33 ರನ್ ಗಳಿಸಿ ಔಟಾದರು. ಭಾರತ ಪರ ಅರ್ಶದೀಪ್ ಸಿಂಗ್ 2, ಅಕ್ಷರ್ ಪಟೇಲ್ 1 ವಿಕೆಟ್ ಕಬಳಿಸಿದರು.
(ಓದಿ: IND vs SA 2nd T20: ಪಂದ್ಯದ ಮಧ್ಯೆಯೇ ಮೈದಾನಕ್ಕೆ ನುಗ್ಗಿದ ಹಾವು)