ನವದೆಹಲಿ: ಐಸಿಸಿ ಟಿ-20 ವಿಶ್ವಕಪ್ ಟೂರ್ನಮೆಂಟ್ ಮುಕ್ತಾಯದ ನಂತರ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ 2022ರವರೆಗೆ ಈ ಸರಣಿ ಮುಂದೂಡಿಕೆಯಾಗಿದೆ.
ನ್ಯೂಜಿಲ್ಯಾಂಡ್ನಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ವಕ್ತಾರರು ಮಾಹಿತಿ ಖಚಿತಪಡಿಸಿದ್ದಾರೆ. ಮೇಲಿಂದ ಮೇಲೆ ಐಸಿಸಿ ಆಯೋಜಿತ ಟೂರ್ನಿಗಳಿರುವ ಕಾರಣ ಹಾಗೂ ಕೋವಿಡ್ನಿಂದಾಗಿ ಸರಣಿ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಕ್ವಾಲಿಫೈಯರ್ ಭಾಗವಾಗಿ ಟೀಂ ಇಂಡಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವೆ ಮೂರು ಏಕದಿನ ಪಂದ್ಯಗಳ ಸರಣಿ ಆಯೋಜನೆಗೊಂಡಿತ್ತು. ಆದರೆ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ವರೆಗೂ ಈ ದ್ವಿಪಕ್ಷೀಯ ಸರಣಿ ಮುಂದೂಡಿಕೆಯಾಗಿದೆ.
ಇದನ್ನೂ ಓದಿ: ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿ ಉಗ್ರರ ದಾಳಿ: ಪಾಕ್‌ನ 7 ಯೋಧರು ಸಾವು
ದುಬೈನಲ್ಲಿ ಆಯೋಜನೆಗೊಂಡಿರುವ ಟಿ-20 ವಿಶ್ವಕಪ್ ಮುಕ್ತಾಯವಾಗುತ್ತಿದ್ದಂತೆ ಟೀಂ ಇಂಡಿಯಾ ನವೆಂಬರ್ ತಿಂಗಳಲ್ಲಿ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ ಇದೀಗ ಮುಂದೂಡಿಕೆಯಾಗಿದೆ. ವಿಶೇಷವೆಂದರೆ ಟೂರ್ನಿ ಮುಂದೂಡಿಕೆಯಾಗಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ಹಂಚಿಕೊಂಡಿಲ್ಲ.