ಹೈದರಾಬಾದ್: ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ-20 ಸರಣಿಯಲ್ಲಿ 3-2 ಅಂತರದಿಂದ ಸರಣಿ ವಶ ಪಡಿಸಿಕೊಂಡಿತ್ತು. 5 ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಬಟ್ಲರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇಬ್ಬರೂ ಬಹಿರಂಗವಾಗಿ ಮಾತಿಗಿಳಿದಿದ್ದರು. ವಿರಾಟ್ ಕೊಹ್ಲಿ ಕೂಡ ಜೋಸ್ ಬಟ್ಲರ್ ವಿರುದ್ಧ ಮೈದಾನದಲ್ಲಿ ಗುಡುಗಿದ್ದರು.
ಇಂಗ್ಲೆಂಡ್ ಇನ್ನಿಂಗ್ಸ್ನ 13 ನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ ಜೋಸ್ ಬಟ್ಲರ್ ಔಟಾಗಿದ್ದರು. ಆ ಸಮಯದಲ್ಲಿ ಇಂಗ್ಲೆಂಡ್‌ನ ಸ್ಕೋರ್ 130 ರನ್ ಆಗಿತ್ತು. ಬಟ್ಲರ್ ವಿಕೆಟ್ ಬಳಿಕ ಮೈದಾನದಲ್ಲಿ ಯಥಾ ಪ್ರಕಾರವಾಗಿ ತಮ್ಮ ಕೋಪ ಹೊರಹಾಕಿದ ಕೊಹ್ಲಿ ಆಟಗಾರರೊಂದಿಗೆ ಸೆಲೆಬ್ರೆಷನ್ ಮೂಡ್ನಲ್ಲಿದ್ದರು.
ಔಟಾದ ಬಳಿಕ ಡಗ್ ಔಟ್‌ಗೆ ಹಿಂದಿರುಗುತ್ತಿದ್ದ ಬಟ್ಲರ್, ವಿರಾಟ್ ಕಡೆ ತಿರುಗಿ ಏನನ್ನೋ ಹೇಳಿದರು, ಇದನ್ನು ಗಮನಿಸಿದ ಕೊಹ್ಲಿ ಕೂಡಲೇ ಸೆಲೆಬ್ರೇಷನ್ ಮೂಡ್ಗೆ ಬ್ರೇಕ್ ಹಾಕಿ ಬಟ್ಲರ್ ಕಡೆಗೆ ಅದೇನೋ ಹೇಳುತ್ತಾ ಧಾವಿಸಿದರು. ಕೊಹ್ಲಿಯ ಬರುವಿಕೆಯನ್ನ ಗಮನಿಸಿದ ಬಟ್ಲರ್ ಸಹ ಡಗ್ಔಟ್ನಿಂದ ವಾಪಸ್ ತಿರುಗಿ ಕೊಹ್ಲಿ ಮಾತಿಗೆ ಪ್ರತ್ಯುತ್ತರ ನೀಡಲು ಆರಂಭಿಸಿದರು. ಕೆಲ ಸಮಯದವರೆಗೆ ಈ ಇಬ್ಬರ ನಡುವಿನ ಮಾತಿನ ಚಕಮಕಿ ಮುಂದುವರೆದಿತ್ತು. ಈ ಇಬ್ಬರ ನಡುವಿನ ವಾಗ್ವಾದಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಓದಿ: ಒಂದೇ ಸರಣಿಯಲ್ಲಿ ಎರಡು ಬಾರಿ ದಂಡ ಕಟ್ಟಿದ ಟೀಂ ಇಂಡಿಯಾ.. ಯಾಕೆ ಗೊತ್ತಾ?
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್, ಇದು ಅಸಮಾನ್ಯವಾದದ್ದೇನಲ್ಲ. ಅಲ್ಲಿ ಏನು ನಡೆಯಿತು ಎನ್ನುವುದು ನನಗೆ ನಿಜವಾಗಿ ಗೊತ್ತಿಲ್ಲ. ವಿರಾಟ್ ಆಡುವಾಗ ತುಂಬಾ ಅಗ್ರೆಸಿವ್ ಆಗಿರುತ್ತಾರೆ. ಅದರಿಂದಲೇ ಅವರು ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಕೆಲವೊಮ್ಮೆ ಈ ತರಹದ ಘಟನೆಗಳು ನಡೆಯುತ್ತವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಅಂದ ಹಾಗೆ, ಇತ್ತೀಚಿನ ಕ್ರಿಕೆಟ್ ಪಂದ್ಯಗಳಲ್ಲಿ ಆಟಗಾರರ ನಡುವಿನ ಜಗಳ ಸಾಮಾನ್ಯವಾಗಿದೆ. ಹಾಗೆಯೇ ಈ ಪಂದ್ಯದಲ್ಲಿ ವಿರಾಟ್ ಮತ್ತು ಬಟ್ಲರ್ ಅವರ ಮಾತಿನ ಚಕಮಕಿಯು ಅಷ್ಟೇ ಪ್ರಬಲವಾಗಿತ್ತು.