ಕರಾಚಿ: ಮಾಜಿ ಕ್ರಿಕೆಟಿಗ ಯೂನಿಸ್ ಖಾನ್ 2022ರ ಟಿ-20 ವಿಶ್ವಕಪ್ವರೆಗೆ ಪಾಕಿಸ್ತಾನ ತಂಡದ ಬ್ಯಾಟಿಂಗ್ ಕೋಚ್ ಆಗಿ ಮುಂದುವರೆಯಲಿದ್ದಾರೆಂದು ಪಿಸಿಬಿ ತಿಳಿಸಿದೆ.
ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅವರ ಬಗ್ಗೆ ಸಕಾರಾತ್ಮಕ ಫೀಡ್ಬ್ಯಾಕ್ ಬಂದಿರುವುದರಿಂದ ಅವರನ್ನು ಬ್ಯಾಟಿಂಗ್ ಕೋಚ್ ಆಗಿ 2 ವರ್ಷಗಳ ಕಾಲ ಮುಂದುವರೆಸಲು ನಿರ್ಧರಿಸುವುದಾಗಿ ಪಿಸಿಬಿ ಹೇಳಿದೆ.
ಮುಂದಿನ ಎರಡು ವರ್ಷಗಳವರೆಗೆ ಯೂನಿಸ್ ಖಾನ್ ನಮ್ಮ ತಂಡದ ಬ್ಯಾಟಿಂಗ್ ಕೋಚ್ ಆಗಿ ಮುಂದುವರೆಯಲಿದ್ದಾರೆ ಎಂದು ತಿಳಿಸಲು ನನಗೆ ಖುಷಿಯಾಗಿದೆ. ಇಂಗ್ಲೆಂಡ್ನಲ್ಲಿ ಅಲ್ಪಾವಧಿಯಲ್ಲೇ ಅವರ ತರಬೇತಿ ಪ್ರಭಾವದ ಬಗ್ಗೆ ನಮಗೆ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ವಾಸಿಮ್ ಖಾನ್ ಹೇಳಿದ್ದಾರೆ.
ಅವರ ಕೆಲಸದ ನೀತಿ, ಬದ್ಧತೆ ಮತ್ತು ಜ್ಞಾನ ಯಾವುದಕ್ಕೂ ಕಡಿಮೆಯಿಲ್ಲ. ಹಾಗಾಗಿ ಅವರ ನೇಮಕಾತಿ ಯುವ ಪ್ರತಿಭಾವಂತ ಬ್ಯಾಟ್ಸ್ಮನ್ಗಳಿಗೆ ಉತ್ತಮ ರೀತಿಯಲ್ಲಿ ಪ್ರಯೋಜನವಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ಅವರು ಹೇಳಿದ್ದಾರೆ.
ಯೂನಿಸ್ ಖಾನ್ ಬ್ಯಾಟಿಂಗ್ ಕೋಚ್ ಜೊತೆಗೆ ಕರಾಚಿಯ ಹೈ ಪರ್ಫಾರ್ಮೆನ್ಸ್ ಸೆಂಟರ್ನಲ್ಲೂ ಪಾಕಿಸ್ತಾನದ ಲೆಜೆಂಡ್ ಮೊಹಮ್ಮದ್ ಯೂಸುಫ್ ಅವರ ಜೊತೆ ಯುವ ಪ್ರತಿಭೆಗಳನ್ನು ತಯಾರು ಮಾಡಲು ಕಾರ್ಯನಿರ್ವಹಿಸಲಿದ್ದಾರೆ ಎಂದು ವಾಸಿಮ್ ತಿಳಿಸಿದ್ದಾರೆ.