ಲಂಡನ್: ಭಾರತ ತಂಡ 2019ರ ವಿಶ್ವಕಪ್ನಲ್ಲಿ ಯಶಸ್ಸಿನ ಉತ್ತುಂಗದಲ್ಲಿದೆ. ಹೀಗಿರುವಾಗ ತಂಡದ ಏಕೈಕ ಸಮಸ್ಯೆಯಾದ 4 ನೇ ಕ್ರಮಾಂಕವನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದರ ಬಗ್ಗೆ ಆಸೀಸ್ ಮಾಜಿ ಕ್ರಿಕೆಟಿಗ ಡೀನ್ ಜಾನ್ಸ್ ಸಲಹೆ ನೀಡಿದ್ದಾರೆ.
12ನೇ ಆವೃತ್ತಿಯ ವಿಶ್ವಕಪ್ನಲ್ಲಿ ಸೋಲಿಲ್ಲದ ಏಕೈಕ ತಂಡ ಎಂದರೆ ಭಾರತ ತಂಡ. ಬ್ಯಾಟಿಂಗ್, ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಎಲ್ಲ ಪಂದ್ಯಗಳಲ್ಲೂ ವಿಜಯ ಸಾಧಿಸಿದೆ. ಆದರೆ, ತಂಡದಲ್ಲಿ ಇದುವರೆಗೂ ಬಗೆ ಹರಿಯದ ಏಕೈಕ ಸಮಸ್ಯೆ ಎಂದರೆ 4 ನೇ ಕ್ರಮಾಂಕ. ಇದಕ್ಕಾಗಿ ಧೋನಿಯನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಿದರೆ ಭಾರತ ತಂಡದ ಸಮಸ್ಯೆ ತೀರಲಿದೆ ಎಂದು ಆಸೀಸ್ ಮಾಜಿ ಆಟಗಾರ ಡೀನ್ ಜೋನ್ಸ್ ಅಭಿಪ್ರಾಯ ಪಟ್ಟಿದ್ದಾರೆ.
ಜೊತೆಗೆ ಅವಕಾಶ ಸಿಕ್ಕರೂ ಉತ್ತಮ ಪ್ರದರ್ಶನ ತೋರದಿರುವ ವಿಜಯ್ ಶಂಕರ್ ಬದಲಿ ಆಲ್ರೌಂಡರ್ ರವೀಂದ್ರ ಜಡೇಜಾರನ್ನು ಆಡುವ 11 ರಲ್ಲಿ ಸೇರಿಸಿಕೊಂಡರೆ ಭಾರತ ತಂಡ ಇನ್ನಷ್ಟು ಬಲಿಷ್ಠವವಾಗಲಿದೆ ಎಂದಿದ್ದಾರೆ.
ಜಡೇಜಾ ಅದ್ಭುತ ಫೀಲ್ಡರ್, ಜೊತೆಗೆ ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲ ಬೌಲರ್ ಆಗಿದ್ದಾರೆ. ಇನ್ನು ಜಡೇಜಾರನ್ನು ಆಯ್ಕೆ ಮಾಡಿದ್ದೇ ಆದಲ್ಲಿ ಭಾರತ ತಂಡದ ಕೆಳಕ್ರಮಾಂಕ ಬಲಿಷ್ಠವಾಗಲಿದೆ. ಧೋನಿ, ಹಾರ್ದಿಕ್ ಪಾಂಡ್ಯ ಅವರಂತಹವರ ಜೊತೆಗೆ ಸ್ಟ್ರೈಕ್ ರೋಟೇಷನ್ಗೆ ಜಡೇಜಾ ಉತ್ತಮ ಸ್ಪರ್ಧಿ ಎಂದು ಜೋನ್ಸ್ ತಿಳಿಸಿದ್ದಾರೆ.
ಆರಂಭಿಕ ಶಿಖರ್ ಧವನ್ ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದ ಹಿನ್ನಲೆ 4 ನೇ ಕ್ರಮಾಂಕದಲ್ಲಿ ಆಡುತ್ತಿದ್ದ ರಾಹುಲ್ ಆರಂಭಿಕ ಸ್ಥಾನಕ್ಕೆ ಬಡ್ತಿ ಪಡೆದಿದ್ದರು. ಇದರಿಂದ ನಾಲ್ಕನೇ ಕ್ರಮಾಂಕಕ್ಕೆ ವಿಜಯ್ ಶಂಕರ್ ಅವರನ್ನು ಆಯ್ಕೆ ಮಾಡಿ 3 ಪಂದ್ಯಗಳಲ್ಲಿ ಅವಕಾಶ ನೀಡಲಾಗಿತ್ತು. ಆದರೆ, ವಿಜಯ್ ಮೂರು ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು.