ಮುಂಬೈ: ಕಳೆದ ಒಂದು ದಶಕದಲ್ಲಿ ಏಕದಿನ ಕ್ರಿಕೆಟ್ನಲ್ಲಿ ಅಗ್ರಮಾನ್ಯ ತಂಡವಾಗಿರುವ ಭಾರತ ತಂಡ ಚೇಜ್ ಮಾಡುವ ಅಭ್ಯಾಸವನ್ನು ಸುಲಭ ಮಾಡಿಕೊಂಡಿದೆ. ಆದರೆ, 300 ಕ್ಕೂ ಹೆಚ್ಚು ಮೊತ್ತವನ್ನು ಚೇಸ್ ಮಾಡುವುದು ತುಂಬಾ ಕಷ್ಟವಾದ ಕೆಲಸ, ಒಂದು ಕಾಲದಲ್ಲಿ 300 ರನ್ ಚೇಸ್ ಮಾಡಿದರೆ ಅದೊಂದು ಬಹುದೊಡ್ಡ ದಿಗ್ವಿಜಯ ಎಂದೇ ಭಾವಿಸಲಾಗುತ್ತಿತ್ತು. ಆದರೆ, ಇಂದಿನ ದಿನಗಳಲ್ಲಿ 400 ರನ್ ಸಿಡಿಸಿದರೂ ಉಳಿಯುವುದಿಲ್ಲ ಎನ್ನುವಂತಾಗಿದೆ.
ಏಕದಿನ ಕ್ರಿಕೆಟ್ ಇತಿಹಾದಲ್ಲಿ ಭಾರತ ತಂಡ 300 ಕ್ಕೂ ಹೆಚ್ಚು ಮೊತ್ತವನ್ನು ಹೆಚ್ಚು ಬಾರಿ ಚೇಸ್ ಮಾಡಿರುವ ತಂಡ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಭಾರತ ತಂಡ ಬರೋಬ್ಬರಿ 18 ಬಾರಿ 300ಕ್ಕೂ ಹೆಚ್ಚು ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿದೆ. 10 ಬಾರಿ ಸೋಲುಕಂಡಿದ್ದರೆ ಒಮ್ಮೆ ಟೈ ಸಾಧಿಸಿದೆ. 18 ಬಾರಿಯ ಯಶಸ್ವಿ ಚೇಸಿಂಗ್ನಲ್ಲಿ ಟಾಪ್ 5 ಹೀಗೆ ನೋಡಿ.
ಪಾಕಿಸ್ತಾನದೆದುರು 330, 2012
2012 ರ ಏಷ್ಯಾಕಪ್ನಲ್ಲಿ ಭಾರತದ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ್ದ ಪಾಕಿಸ್ತಾನ ಮೊಹಮ್ಮದ್ ಹಫೀಜ್ ಹಾಗೂ ನಾಜಿರ್ ಜೆಮ್ಶೆಡ್ ಅವರ ಶತಕದ ನೆರವಿನಿಂದ 330 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಗೆಲ್ಲಲೇಬೇಕಾದ ಈ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ಗಳಿಂದ ಗೆದ್ದು ಬೀಗಿತ್ತು.
ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ತಂಡ ಆರಂಭದಲ್ಲಿ ಗಂಭೀರ್(0) ವಿಕೆಟ್ ಕಳೆದುಕೊಂಡಿತ್ತು. ಆದರೆ ಸಚಿನ್ ತೆಂಡೂಲ್ಕರ್(52) ಯುವ ಬ್ಯಾಟ್ಸ್ಮನ್ ಕೊಹ್ಲಿ ಜೊತೆಗೆ 132 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದ್ದರು. ಸಚಿನ್ ಔಟಾದ ನಂತರ ಬಂದ ರೋಹಿತ್ ಶರ್ಮಾ(68) ಜೊತೆ ಕೊಹ್ಲಿ 172 ರನ್ಗಳ ಬೃಹತ್ ಜೊತೆಯಾಟ ನಡೆಸಿ ಗೆಲುವಿನ ಹಾದಿ ಸುಗಮ ಮಾಡಿದರು.
ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಕೊಹ್ಲಿ148 ಎಸೆತಗಳಲ್ಲಿ 22 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 183 ರನ್ಗಳಿಸಿದ್ದರು. ಈ ಪಂದ್ಯವನ್ನು ಭಾರತ 6 ವಿಕೆಟ್ಗಳಿಂದ ಜಯ ಸಾಧಿಸಿತ್ತು. ಪಾಕಿಸ್ತಾನದಂತಹ ಪ್ರಬಲ ಬೌಲಿಂಗ್ ದಾಳಿ ಹೊಂದಿರುವ ತಂಡದೆದುರು ಕೊಹ್ಲಿ ಸಿಡಿಸಿದ ಈ ಶತಕ ಇಂದಿಗೂ ಅವಿಸ್ಮರಣೀಯವಾಗಿದೆ.
ಆಸ್ಟ್ರೇಲಿಯಾ ವಿರುದ್ಧ 362 ರನ್; 2013
ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತ ಯಾವಾಗ ಸ್ಪರ್ಧಿಸಿದರೂ ಎರಡು ತಂಡಗಳು ಅತ್ಯುತ್ತಮ ಪ್ರದರ್ಶನ ತೋರುತ್ತವೆ. 2013ರಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದ ಆಸ್ಟ್ರೇಲಿಯಾ ತಂಡ ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ, ಮೊದಲ 5 ಕ್ರಮಾಂಕದ ಬ್ಯಾಟ್ಸ್ಮನ್ಗಳ ಅರ್ಧಶತಕದ ನೆರವಿನಿಂದ 359 ರನ್ಗಳಿಸಿತ್ತು.
ಈ ಮೊತ್ತವನ್ನು ಭಾರತ ಕೇವಲ ಒಂದು ವಿಕೆಟ್ ಕಳೆದುಕೊಂಡು ತಲುಪಿ ದಾಖಲೆ ಬರೆದಿತ್ತು. ಆರಂಭಿಕರಾದ ರೋಹಿತ್ ಶರ್ಮಾ ಔಟಾಗದೆ 141, ಶಿಖರ್ ಧವನ್ 95 ಹಾಗೂ ವಿರಾಟ್ ಕೊಹ್ಲಿ ಔಟಾಗದೇ 100 ರನ್ಗಳಿಸಿ ದಾಖಲೆ ಜಯಕ್ಕೆ ಕಾರಣರಾಗಿದ್ದರು. ವಿರಾಟ್ ಕೊಹ್ಲಿ ಕೇವಲ 52 ಎಸೆತಗಳಲ್ಲಿ ಶತಕ ಸಿಡಿಸಿ ಭಾರತದ ಪರ ವೇಗದ ಶತಕ ಸಿಡಿಸಿದ್ದರು.
ಆಸ್ಟ್ರೇಲಿಯಾ ವಿರುದ್ಧ 351 ರನ್ 2013
ಆಸ್ಟ್ರೇಲಿಯಾ ವಿರುದ್ಧ 360 ರನ್ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿದ ಸರಣಿಯ ಮತ್ತೊಂದು ಪಂದ್ಯದಲ್ಲಿ ಭಾರತ 351 ರನ್ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ ತಂಡ ಜಾರ್ಜ್ ಬೈಲಿ (156) ಹಾಗೂ ಶೇನ್ ವಾಟ್ಸನ್(102) ಶತಕಗಳ ನೆರವಿನಿಂದ 351 ರನ್ಗಳ ಬೃಹತ್ ಮೊತ್ತ ಕಲೆಯಾಕಿತ್ತು.
ಆದರೆ, ಭಾರತ ತಂಡ ಈ ಮೊತ್ತವನ್ನು 4 ವಿಕೆಟ್ ಕಳೆದುಕೊಂಡು ತಲುಪಿತ್ತು. ಆರಂಭಿಕ ರೋಹಿತ್ ಶರ್ಮಾ(79), ಶಿಖರ್ ಧವನ್ 102 ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಶತಕ(115) ರನ್ಗಳ ನೆರವಿನಿಂದ ಭಾರತ 6 ವಿಕೆಟ್ಗಳ ಜಯ ಸಾಧಿಸಿತ್ತು.
ಆಸ್ಟ್ರೇಲಿಯಾ ವಿರುದ್ಧ 331 ಸಿಡ್ನಿ 2016
ಭಾರತ ತವರಿನ ಕ್ರೀಡಾಂಗಣದಲ್ಲಿ 300ಕ್ಕೂ ಹೆಚ್ಚು ರನ್ ಚೇಸ್ ಮಾಡಿ ದಾಖಲೆ ಮೇಲೆ ದಾಖಲೆ ಬರೆದಿತ್ತು. ಆದರೆ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲೂ 331 ರನ್ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಶ್ ಅವರ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಅಂದು 330 ರನ್ಗಳಿಸಿತ್ತು.
ಬೃಹತ್ ಮೊತ್ತ ತನ್ನ ಮುಂದಿದ್ದರು ತಲೆಕೆಡಿಸಿಕೊಳ್ಳದ ಭಾರತ ತಂಡ ಮೊದಲ ವಿಕೆಟ್ಗೆ 123 ರನ್ಗಳ ಜೊತೆಯಾಟ ನಡೆಸಿದ್ದರು. ರೋಹಿತ್ 99 ರನ್ಗಳಿಸಿ ಔಟಾದರೆ, ಧವನ್ 78 ರನ್ ರನ್ಗಳಿಸಿದ್ದರು. ನಂತರ ಬಂದ ಕೊಹ್ಲಿ ವಿಕೆಟ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದ್ದರು. ಆದರೆ ಕನ್ನಡಿಗ ಮನೀಷ್ ಪಾಂಡೆ 81 ಎಸೆತಗಳಲ್ಲಿ 104 ರನ್ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.
ಇಂಗ್ಲೆಂಡ್ ವಿರುದ್ಧ 356, 2017
ವಿರಾಟ್ ಕೊಹ್ಲಿ ಏಕದಿನ ತಂಡದ ನಾಯಕತ್ವದ ನಾಯಕತ್ವ ವಹಿಸಿಕೊಂಡಿದ್ದ ಮೊದಲ ಸರಣಿಯಲ್ಲಿ ಕೊಹ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ತೋರಿ ಭಾರತಕ್ಕೆ ರೋಚಕ ಗಲುವು ತಂದುಕೊಟ್ಟಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 351ರನ್ಗಳ ಬೃಹತ್ ಮೊತ್ತ ಸಿಡಿಸಿತ್ತು. ಈ ಮೊತ್ತ ಚೇಸ್ ಮಾಡುತ್ತಿದ್ದ ಭಾರತ ತಂಡ 63 ರನ್ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ಈ ವೇಳೆ, ಭಾರತ ತಂಡಕ್ಕೆ ಕೇದಾರ್ ಜಾದವ್(120) ಹಾಗೂ ನಾಯಕ ವಿರಾಟ್ ಕೊಹ್ಲಿ(122) 5ನೇ ವಿಕೆಟ್ಗೆ 200 ರನ್ಗಳ ಜೊತೆಯಾಟ ನಡೆಸಿ ಭಾರತಕ್ಕೆ ಜಯ ತಂದುಕೊಟ್ಟಿದ್ದರು.
ಭಾರತ 18ಕ್ಕೂ ಹೆಚ್ಚು ಬಾರಿ ಏಕದಿನ ಕ್ರಿಕೆಟ್ನಲ್ಲಿ ಯಶಸ್ವಿಯಾಗಿ ಚೇಸ್ ಮಾಡಿದೆ. ಆದರೆ ಈ 5 ಅತ್ಯಂತ ಮಹತ್ವ ಪಡೆದುಕೊಂಡಿವೆ. ಇನ್ನು ಒಟ್ಟಾರೆ 300 ಹಾಗೂ 350ಕ್ಕೂ ಹೆಚ್ಚು ಬಾರಿ ದಾಖಲಿಸಿದ ತಂಡ ಎಂಬ ದಾಖಲೆಯನ್ನು ಭಾರತ ತನ್ನ ಹೆಸರಿಗೆ ಬರೆದುಕೊಂಡಿದೆ. ಈಗಾಗಲೆ ಏಕದಿನ ಕ್ರಿಕೆಟ್ನಲ್ಲಿ ಎರಡನೇ ಶ್ರೇಯಾಂಕದಲ್ಲಿರುವ ಟೀಮ್ ಇಂಡಿಯಾ ವಿಶ್ವದ ಯಾವುದೇ ತಂಡವನ್ನಾದರೂ ಮಣಿಸುವ ತಾಕತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ದಾಖಲೆಯನ್ನು ಸೃಷ್ಟಿಸಲಿ ಎಂಬುದು ಭಾರತೀಯ ಅಭಿಮಾನಿಗಳ ಆಶಯವಾಗಿದೆ