ಹೈದರಾಬಾದ್: ಪ್ರತಿಯೊಬ್ಬ ಕ್ರಿಕೆಟಿಗನಿಗೂ ತಮ್ಮ ದೇಶವನ್ನು ಒಮ್ಮೆಯಾದರು ಪ್ರತಿನಿಧಿಸಿಬೇಕು ಎಂಬ ಕನಸು ಇದ್ದೇ ಇರುತ್ತದೆ. ಅದು ಒಮ್ಮೆ ಆ ಅವಕಾಶ ಸಿಕ್ಕರೆ ಅದನ್ನು ಅವಿಸ್ಮರಣೀಯವಾಗಿಸಿಕೊಳ್ಳಲು ಬಯಸುತ್ತಾರೆ. ದೇಶಿ ಕ್ರಿಕೆಟ್ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಹೊಂದಿಕೊಳ್ಳುವುದು ಅಷ್ಟು ಸುಲಭವಲ್ಲ. ಅದರಲ್ಲೂ ಟೆಸ್ಟ್ ಕ್ರಿಕೆಟ್ನಲ್ಲಿ ಪದಾರ್ಪಣೆ ಪಂದ್ಯದಲ್ಲಿ ಉತ್ತಮವಾಗಿ ಆಡುವುದು ಇನ್ನೂ ಕಷ್ಟ. ಆದರೂ ಕೆಲವು ಕ್ರಿಕೆಟಿಗರು ತಮ್ಮ ಪದಾರ್ಪಣೆ ಪಂದ್ಯದಲ್ಲೇ ವಿಶ್ವಕ್ರಿಕೆಟ್ ಅನ್ನೆ ತನ್ನತ್ತ ಒಮ್ಮೆ ತಿರುಗುವಂತೆ ಮಾಡಿದ್ದರು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಗೆ ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ವಿಶ್ವದ ಟಾಪ್ 5 ಕ್ರಿಕೆಟಿಗರು
ಎರಿಸ್ಕಿನ್ ಫೋಸ್ಟರ್
ಇಂಗ್ಲೆಂಡ್ನ ಎರಿಸ್ಕಿನ್ ಫೋಸ್ಟರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮಗೆ ಸಿಕ್ಕ ಮೊದಲ ಅವಕಾಶವನ್ನು ವ್ಯರ್ಥ ಮಾಡಿಕೊಳ್ಳಲಿಲ್ಲ. ಅವರು 1903ರಲ್ಲಿ ಮೊದಲ ಬಾರಿಗೆ ಆ್ಯಶಸ್ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು. ಆ ಪಂದ್ಯ ಸಿಡ್ನಿ ಮೈದಾನದಲ್ಲಿ ನಡೆದಿತ್ತು. ವೈಯಕ್ತಿಕ ಕಾರಣದಿಂದ ತಮ್ಮ ದೇಶದ ಪರ ಬೇಗ ಪದಾರ್ಪಣೆ ಮಾಡುವ ಅವಕಾಶ ಕಳೆದುಕೊಂಡಿದ್ದರಾದರೂ, ಡೆಬ್ಯು ಪಂದ್ಯವನ್ನು ಮಾತ್ರ ಸ್ಮರಣೀಯವಾಗಿಸಿಕೊಂಡಿದ್ದರು.
ಆ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಫೋಸ್ಟರ್ ಬರೋಬ್ಬರಿ 37 ಬೌಂಡರಿಗಳ ನೆರವಿನಿಂದ 287 ರನ್ಗಳಿಸಿ ವಿಶ್ವದಾಖಲೆ ಬರೆದಿದ್ದರು. ಇಂಗ್ಲೆಂಡ್ ಪರ 8 ಟೆಸ್ಟ್ ಪಂದ್ಯಗಳನ್ನಾಡಿದ್ದ ಅವರು ಆನಾರೋಗ್ಯದ ಕಾರಣ ಬೇಗನೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. 1914 ರಂದು ಸಕ್ಕರೆ ಕಾಯಿಲೆಯಿಂದ 36 ವರ್ಷಕ್ಕೆ ನಿಧನರಾದರು.
ಬಾಬ್ ಮಾಸ್ಸಿ
ಆಸ್ಟ್ರೇಲಿಯಾದ ಬಾಬ್ ಮಾಸ್ಸಿ ಟೆಸ್ಟ್ ಕ್ರಿಕೆಟ್ನಲ್ಲಿ ಕೇವಲ 6 ಪಂದ್ಯಗಳನ್ನಾಡಿದರೂ ಅವರ ಡೆಬ್ಯು ಪಂದ್ಯ ಮಾತ್ರ ಎಂದಿಗೂ ಮರೆಯುವಂತಿಲ್ಲ. 1972ರಲ್ಲಿ ಲಾರ್ಡ್ಸ್ನಲ್ಲಿ ನಡೆದಿದ್ದ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಮಾಸ್ಸಿ 137 ರನ್ ನೀಡಿ 16 ವಿಕೆಟ್ ಪಡೆದಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 84ಕ್ಕೆ8, ಎರಡನೇ ಇನ್ನಿಂಗ್ಸ್ನಲ್ಲಿ 53ಕ್ಕೆ 8 ವಿಕೆಟ್ ಪಡೆದಿದ್ದರು. ಇವರ ಬೌಲಿಂಗ್ ಪ್ರದರ್ಶನದಿಂದ ಆಸ್ಟ್ರೇಲಿಯಾ 8 ವಿಕೆಟ್ಗಳ ಜಯ ಸಾಧಿಸಿತ್ತು. ಮಾಸ್ಸಿ 137ಕ್ಕೆ 16 ವಿಕೆಟ್ ಪಡೆದಿರುವುದು ಟೆಸ್ಟ್ ಇತಿಹಾಸದಲ್ಲಿ ಡೆಬ್ಯು ಆಟಗಾರನಿಂದ ದಾಖಲಾದ ಎರಡನೇ ಅತ್ಯುತ್ತಮ ಇನ್ನಿಂಗ್ಸ್ ಆಗಿ ಉಳಿದುಕೊಂಡಿತು.
ಲಾರೆನ್ಸ್ ರೋವ್
ವೆಸ್ಟ್ ಇಂಡೀಸ್ನ ಲಾರೆನ್ಸ್ ರೋವ್ ತಮ್ಮ ಪದಾರ್ಪಣೆ ಪಂದ್ಯದಲ್ಲೇ ನ್ಯೂಜಿಲ್ಯಾಂಡ್ ತಂಡವನ್ನು ತಮ್ಮ ಬ್ಯಾಟಿಂಗ್ ಕರಾಮತ್ತಿನಿಂದ ಕಂಗೆಡಿಸಿದ್ದರು. ಅವರು 1972 ರಲ್ಲಿ ತಮ್ಮ ತವರೂರಾದ ಕಿಂಗ್ಸ್ಟನ್ನ ಸಬೀನಾ ಪಾರ್ಕ್ನಲ್ಲಿ ನಡೆದ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 214 ರನ್ ರನ್ಗಳಿಸಿದ್ದರು.
ಎರಡನೇ ಇನ್ನಿಂಗ್ಸ್ನಲ್ಲೂ ಔಟಾಗದೆ 100 ರನ್ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡೂ ಇನ್ನಿಂಗ್ಸ್ನಲ್ಲೂ ಶತಕಗಳಿಸಿದ ಮೊದಲ ಕ್ರಿಕೆಟರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. ಆದರೆ ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.
ನರೇಂದ್ರ ಹಿರ್ವಾನಿ
ವೆಸ್ಟ್ ಇಂಡೀಸ್ ಭಾರತಕ್ಕೆ 1987-88 ರಲ್ಲಿ ಪ್ರವಾಸ ಕೈಗೊಂಡು ಮೊದಲ ಟೆಸ್ಟ್ ಪಂದ್ಯವನ್ನು 5 ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು. 2 ಮತ್ತು 3ನೇ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡಿತ್ತು. ಚೆನ್ನೈನಲ್ಲಿ ನಡೆದ 4ನೇ ಟೆಸ್ಟ್ನಲ್ಲಿ 19 ವರ್ಷದ ನರೇಂದ್ರ ಹಿರ್ವಾನಿ ಪ್ರವಾಸಿಗರನ್ನು ದಂಗಾಗಿಸಿದ್ದರು. ಲೆಗ್ಸ್ಪಿನ್ನರ್ ಆ ಪಂದ್ಯದಲ್ಲಿ 16 ವಿಕೆಟ್ ಪಡೆದು ಮಿಂಚಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 61 ರನ್ಗೆ 8 ವಿಕೆಟ್, ಎರಡನೇ ಇನ್ನಿಂಗ್ಸ್ನಲ್ಲಿ 75 ರನ್ಗೆ 8 ವಿಕೆಟ್ ಪಡೆದು ಮಿಂಚಿದ್ದರು.
ಆ ಪಂದ್ಯದಲ್ಲಿ ಭಾರತ 255 ರನ್ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿತ್ತು. ವಿವ್ ರಿಚರ್ಡ್ಸ್ಮ ರಿಚಿ ರಿಚರ್ಡ್ಸನ್, ಕಾರ್ಲ್ ಹೂಪರ್ ಮತ್ತು ಡೆಸ್ಮಂಡ್ ಹೈನೆಸ್ರಂತಹ ಮಹಾನ್ ಆಟಗಾರರ ವಿಕೆಟ್ ಪಡೆಯುವಲ್ಲಿ ಹಿರ್ವಾನಿ ಯಶಸ್ವಿಯಾಗಿದ್ದರು.
ಹಿರ್ವಾನಿ ಭಾರತದ ಪರ ಕೇವಲ 17 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ, ಇವರ 136 ರನ್ಗೆ 16 ವಿಕೆಟ್ ಇಂದಿಗೂ ಟೆಸ್ಟ್ ಪದಾರ್ಪಣೆ ಮಾಡಿದ ಬೌಲರ್ನಿಂದ ದಾಖಲಾಗಿರುವ ಅತ್ಯುತ್ತಮ ಪ್ರದರ್ಶನವಾಗಿದೆ.
ಜಾಕ್ಸ್ ರುಡಾಲ್ಫ್
ನಿನ್ನೆಗೆ(ಏಪ್ರಿಲ್ 26) 17 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ಜಾಕ್ಸ್ ರುಡಾಲ್ಫ್ ತಮ್ಮ ಟೆಸ್ಟ್ ಕರಿಯರ್ ಆರಂಭಿಸಿದ್ದರು. ಅಂದು 21 ವರ್ಷದವರಾಗಿದ್ದ ರುಡಾಲ್ಫ್ ಬಾಂಗ್ಲಾದೇಶದ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಚಿತ್ತಗಾಂಗ್ನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಎಂಟುವರೆಗಂಟೆ ಬ್ಯಾಟಿಂಗ್ ನಡೆಸಿದ್ದ ಅವರು 222 ರನ್ ಗಳಿಸಿದ್ದರು. ಅವರು ಬೋಯೆಟಾ ಡಿಪ್ಪೆನಾರ್ (177)ಜೊತೆ 429 ರನ್ಗಳ ಜೊತೆಯಾಟ ನಡೆಸಿದ್ದರು. ಇದು ದಕ್ಷಿಣ ಆಫ್ರಿಕನ್ ಪರ ಯಾವುದೇ ವಿಕೆಟ್ ದಾಖಲಾಗಿರುವ ಅತಿ ಹೆಚ್ಚುರನ್ಗಳ ಜೊತೆಯಾಟವಾಗಿದೆ.
ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇನ್ನಿಂಗ್ಸ್ ಹಾಗೂ 60 ರನ್ಗಳ ಜಯ ಸಾಧಿಸಿತ್ತು. ರುಡಾಲ್ಫ್ 48 ಟೆಸ್ಟ್ಗಳಲ್ಲಿ ದ. ಆಫ್ರಿಕಾ ತಂಡವನ್ನು ಪ್ರತಿನಿಧಿಸಿ 2622 ರನ್ಗಳಿಸಿ ವೃತ್ತಿ ಜೀವನ ಅಂತ್ಯಗೊಳಿಸಿದರು.