ಮುಂಬೈ: ಕಳೆದ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ (ಕಿಂಗ್ಸ್ ಇಲೆವೆನ್ ಪಂಜಾಬ್) ತಂಡದ ನಾಯಕನಾಗಿದ್ದ ಕೆ ಎಲ್ ರಾಹುಲ್ 14 ಪಂದ್ಯಗಳಿಂದ 670 ರನ್ಗಳಿಸಿದ್ದರು. ಆದರೂ ಅವರ ನಿಧಾನಗತಿಯ ಆಟ ಟೀಕೆಗೆ ಗುರಿಯಾಗಿತ್ತು. ಆದರೆ ಈ ಬಾರಿ ಅವರಿಂದ ನಾವೆಲ್ಲರೂ ಸ್ಫೋಟಕ ಬ್ಯಾಟಿಂಗ್ ನೋಡಲಿದ್ದೇವೆ ಎಂದು ಕೋಚ್ ವಾಸಿಂ ಜಾಫರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಪಂದ್ಯ ಮುಗಿದ ನಂತರ ಮಾತನಾಡುತ್ತಿದ್ದ ಕೆ ಎಲ್ ರಾಹುಲ್, ಸ್ಟ್ರೈಕ್ ರೇಟ್ ತುಂಬಾ ಅತಿಯಾಗಿ ನೋಡಲಾಗುತ್ತಿದೆ ಎಂದು ಹೇಳಿದ್ದರು. ಕ್ರಿಕೆಟ್ ವಲಯದಲ್ಲಿ ರಾಹುಲ್ರ ಈ ಅಭಿಪ್ರಾಯಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ ಬಂದಿದ್ದವು.
ಆದರೆ ರಾಹುಲ್ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ವಾಸಿಂ ಜಾಫರ್ " ಕಳೆದ ವರ್ಷ ತಂಡ ಇದ್ದ ಪರಿಸ್ಥಿತಿಯಲ್ಲಿ ರಾಹುಲ್ ಅದೇ ರೀತಿ ಆಡಬೇಕಿತ್ತು, ಏಕೆಂದರೆ ತಂಡದಲ್ಲಿ ನಂಬಿಕಾರ್ಹ ಫಿನಿಶರ್ ಇರಲಿಲ್ಲ. ಆದರೆ ಈ ಬಾರಿ ಅವರಿಂದ ಆಕ್ರಮಣಕಾರಿ ಆಟ ಮೂಡಿಬರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಕಳೆದ ಐಪಿಎಲ್ನಲ್ಲಿ ರಾಹುಲ್ ಸ್ವಲ್ಪ ಭಯಸ್ಥರಾಗಿ ಬ್ಯಾಟಿಂಗ್ ಮಾಡಿದ್ದರು. ಗ್ಲೇನ್ ಮ್ಯಾಕ್ಸ್ವೆಲ್ರಿಂದ ಉತ್ತಮ ಪ್ರದರ್ಶನ ಬರುತ್ತಿರಲಿಲ್ಲ. ಈ ಕಾರಣ ತಂಡದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಅವರು ದೀರ್ಘಕಾಲದವರೆಗೆ ಆಡಬೇಕಾಗಿತ್ತು. ಆ ಜವಾಬ್ದಾರಿಯನ್ನು ನಿರ್ವಹಿಸುವ ಸಮಯದಲ್ಲಿ ನಿಧಾನಗತಿ ಆಟಕ್ಕೆ ಮೊರೆ ಹೋಗುತ್ತಿದ್ದರು. ಆದರೆ ಈಗ ಸಮಯ ಬದಲಾಗಿದೆ, ಖಂಡಿತ ಪ್ರತಿಯೊಬ್ಬರು ಈ ಬಾರಿ ಸಿಡಿಲಬ್ಬರದ ಕೆ ಎಲ್ ರಾಹುಲ್ರನ್ನು ನೋಡಲಿದ್ದೀರಾ" ಎಂದು ಜಾಫರ್ ಭರವಸೆ ವ್ಯಕ್ತಪಡಿಸದ್ದಾರೆ.
" ಇದು ನಿಜವಾದ ಸಂಗತಿ, ರಾಹುಲ್ ಮೂರು ಆಯಾಮದ ಆಟಗಾರ, ಅವರು ನಾಯಕ, ಆರಂಭಿಕ ಬ್ಯಾಟ್ಸ್ಮನ್ ಮತ್ತು ವಿಕೆಟ್ ಕೀಪರ್ ಆಗಿದ್ದಾರೆ. ಟಿ20 ಸರಣಿಯಲ್ಲಿ ಮರೆಯಲಾಗದ ವೈಫಲ್ಯ ಅನುಭವಿಸಿದ ನಂತರ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಉತ್ತಮ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದ ಪರಿ ಪಂಜಾಬ್ ತಂಡಕ್ಕೆ ಶುಭ ಸೂಚನೆಯಾಗಿದೆ" ಎಂದು ಅವರು ತಿಳಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲೂ ತಂಡದಲ್ಲಿ ಬದಲಾವಣೆಯಾಗಿದೆ. ಜೇ ರಿಚರ್ಡ್ಸನ್ ಮತ್ತು ರಿಲೇ ಮೆರಿಡಿತ್ ತಂಡ ಸೇರಿಕೊಂಡಿದ್ದು, ಶಮಿ ಜೊತೆಗೆ ಉತ್ತಮ ಜೊತೆಗಾರರಾಗಿದ್ದಾರೆ ಎಂದು ಜಾಫರ್ ಪ್ರಸ್ತುತ ತಂಡ ಕಳೆದ ಬಾರಿಯ ತಂಡಕ್ಕಿಂತ ಭಿನ್ನ ಮತ್ತು ಸಮತೋಲನದಿಂದ ಕೂಡಿದೆ ಎಂದಿದ್ದಾರೆ.
ಇದನ್ನು ಓದಿ:ಸಿಎಸ್ಕೆ ತಂಡಕ್ಕೆ ಸೇರ್ತಾರಾ ಇಂಗ್ಲೆಂಡ್ ಸ್ಫೋಟಕ ಬ್ಯಾಟ್ಸ್ಮನ್ ? ಟ್ವಿಟ್ಟರ್ ಟ್ರೆಂಡ್ ಆದ ಅಲೆಕ್ಸ್