ಸಿಡ್ನಿ: ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಗಾಯದ ಕಾರಣ 2018ರ ಐಪಿಎಲ್ನಿಂದ ಹೊರಬಿದ್ದಿದ್ದರು. ಗಾಯಗೊಂಡಿದ್ದರಿಂದ ಲೀಗ್ ತಪ್ಪಿಸಿಕೊಂಡಿದ್ದರಿಂದ ಅವರು 1.53 ಮಿಲಿಯನ್ ಡಾಲರ್ ಇನ್ಸುರೆನ್ಸ್ ಹಣಕ್ಕಾಗಿ ಹೋರಾಟ ನಡೆಸಿದ್ದರು. ಇದೀಗ ಇನ್ಸುರೆನ್ಸ್ ಕಂಪನಿಯೊಂದಿಗೆ ಒಪ್ಪಂದದ ಮೂಲಕ ಈ ವಿವಾದವನ್ನು ಬಗೆಹರಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡು ಐಪಿಎಲ್ನಿಂದ ಹೊರಬಿದ್ದಿದ್ದರಿಂದ ಅವರು ತಮಗೆ ಬರಬೇಕಿದ್ದ ಇನ್ಸುರೆನ್ಸ್ ಹಣಕ್ಕಾಗಿ ವಿಮೆದಾರರ ವಿರುದ್ಧ ಕಳೆದ ವರ್ಷ ಏಪ್ರಿಲ್ನಲ್ಲಿ ಮೊಕದ್ದಮೆ ಹೂಡಿದ್ದರು.
ಇದೀಗ ವಿಕ್ಟೋರಿಯಾ ಕೋರ್ಟ್ನಲ್ಲಿ ಇನ್ನೆರಡು ದಿನಗಳಲ್ಲಿ ಪ್ರಕರಣದ ವಿಚಾರಣೆ ನಡೆಯುವ ಮುನ್ನವೇ ಇನ್ಸುರೆನ್ಸ್ ಕಂಪನಿ ಸೋಮವಾರ ಒಪ್ಪಂದಕ್ಕೆ ಮುಂದಾಗಿದೆ ಎನ್ನಲಾಗ್ತಿದೆ.
ಹಣಕಾಸಿನ ಒಪ್ಪಂದ ಸೇರಿದಂತೆ ಒಪ್ಪಂದದ ಷರತ್ತುಗಳನ್ನು ಬಿಡುಗಡೆ ಮಾಡಿಲ್ಲ. ಆದರೆ, ಕೆಲವೇ ದಿನಗಳಲ್ಲಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗ್ತಿದೆ.
2018ರಲ್ಲಿ ಕೆಕೆಆರ್ 9 ಕೋಟಿ 40 ಲಕ್ಷ ರೂ.ಗಳಿಗೆ ಸ್ಟಾರ್ಕ್ ರನ್ನು ಖರೀದಿಸಿತ್ತು. ಆದರೆ ದಕ್ಷಿಣ ಅಫ್ರಿಕಾ ವಿರುದ್ಧದ ಸರಣಿ ವೇಳೆ ಅವರು ಗಾಯಗೊಂಡಿದ್ದರಿಂದ ಐಪಿಎಲ್ನಲ್ಲಿ ಒಂದೂ ಪಂದ್ಯವನ್ನು ಆಡದೆ ತಪ್ಪಿಸಿಕೊಂಡಿದ್ದರು.
ಇದಕ್ಕೂ ಮುನ್ನ ತಮಗೆ 2020ರ ಐಪಿಎಲ್ ನಿಂದ ಹೊರಗುಳಿದಿರುವುದಕ್ಕೆ ಪಶ್ಚಾತ್ತಾಪವಿಲ್ಲ. ನನ್ನ ನಿರ್ಧಾರದಲ್ಲಿ ಬದಲಾವಣೆಯಿಲ್ಲ. ಸೆಪ್ಟಂಬರ್ನಲ್ಲಿ ನಾನು ಐಪಿಎಲ್ ನಡೆಯುವಾಗ ಸಂತೋಷದಿಂದ ಸಮಯ ಕಳೆಯಲಿದ್ದೇನೆ. ಮತ್ತು ಮುಂದಿನ ಬೇಸಿಗೆ ಕ್ರಿಕೆಟ್ಗೆ ಸಿದ್ಧವಾಗಲಿದ್ದೇನೆ ಎಂದು ಸ್ಟಾರ್ಕ್ ತಿಳಿಸಿದ್ದರು.
ಐಪಿಎಲ್ ಮುಂದಿನ ವರ್ಷವೂ ಇರುತ್ತದೆ. ನನಗೆ ಅವಕಾಶ ಬಂದರೆ ಅಥವಾ ಜನರು ನಾನು ಆಡಬೇಕೆಂದು ಬಯಸಿದರೆ ಖಂಡಿತವಾಗಿಯೂ ಅದನ್ನು ಪರಿಗಣಿಸಲಿದ್ದೇನೆ ಎಂದು ಹೇಳಿದ್ದಾರೆ.