ಕೋಲ್ಕತ್ತಾ: ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ನ ಕಾರ್ಯದರ್ಶಿ ಸ್ನೇಹಶಿಶ್ ಗಂಗೂಲಿ ಅವರ ಕುಟುಂಬದ ಸದಸ್ಯರೊಬ್ಬರಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿದೆ ಎಂದು ಶುಕ್ರವಾರ ರಾಜ್ಯ ಆರೋಗ್ಯ ಇಲಾಖೆ ದೃಢಪಡಿಸಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಣ್ಣ ಸ್ನೇಹಶಿಶ್ ಅವರ ಪತ್ನಿಗೆ ಕೋವಿಡ್ 19 ಸೋಕು ಹರಡಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ. ಸ್ನೇಹಶೀಷ್ ಪತ್ನಿಗೂ ಮುನ್ನ ಕಳೆದ ವಾರ ಅವರ ಅತ್ತೆ ಮತ್ತ ಮಾವ ಇಬ್ಬರ ವರದಿ ಕೂಡ ಪಾಸಿಟಿವ್ ಬಂದಿತ್ತು ಎಂದು ಅವರು ತಿಳಿಸಿದ್ದಾರೆ.
ಇದರ ಜೊತೆಗೆ ಸ್ನೇಹಶೀಷ್ರ ಮೊಮಿನ್ಪುರದ ನಿವಾಸದಲ್ಲಿ ವಾಸಿಸುತ್ತಿದ್ದ ಮನೆಯ ಕೆಲಸದವರಿಗೂ ಕೊವೀಡ್ ಪಾಸಿಟಿವ್ ವರದಿ ಬಂದಿದೆ. ಅವರೆಲ್ಲರೂ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಮಾಜಿ ರಣಜಿ ಕ್ರಿಕೆಟಿಗರಾಗಿರುವ ಸ್ನೇಹಶಿಶ್ ಅವರಿಗೆ ಕೋವಿಡ್ ಪರೀಕ್ಷೆಯಲ್ಲಿ ನಕಾರಾತ್ಮಕ ವರದಿ ಬಂದಿದೆ. ಅವರಿಗೆ ಮನೆಯಲ್ಲೇ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
"ನಾಲ್ವರಿಗೂ ಕೋವಿಡ್ 19 ಕೆಲವು ಲಕ್ಷಣಗಳು ಕಂಡು ಬಂದಿದ್ದರಿಂದ ಅವರು ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದರು. ಅವರು ಗಂಗೂಲಿ ಅವರು ಪೂರ್ವಜರು ವಾಸಿಸುವ ಮನೆಯಲ್ಲಿ ಇರಲಿಲ್ಲ, ಬೇರೊಂದು ನಿವಾಸದಲ್ಲಿದ್ದರು. ಪಾಸಿಟಿವ್ ವರದಿ ಬಂದ ನಂತರ ನಾಲ್ವರನ್ನು ಖಾಸಗಿ ನರ್ಸಿಂಗ್ ಹೋಮ್ಗೆ ಸ್ಥಳಾಂತರಿಸಲಾಯಿತು" ಎಂದು ಇಲಾಖೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಎಲ್ಲರಿಗೂ ಚಿಕಿತ್ಸೆ ನೀಡುವ ಮುನ್ನ ಶನಿವಾರ ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಲಾಗುವುದು ಎಂದು ನರ್ಸಿಂಗ್ ಹೋಮ್ ಮೂಲದಿಂದ ತಿಳಿದು ಬಂದಿದೆ.