ಕುಪ್ವಾರಾ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಪ್ರದೇಶಗಳಲ್ಲಿ ಸದಾ ಗುಂಡಿನ ಸದ್ದನ್ನು ಕೇಳುತ್ತಿದ್ದ ಯುವಕರು ಸದ್ಯ ಹಿಂಸಾಚಾರಕ್ಕೆ ಗುಡ್ ಬೈ ಹೇಳಿ ಬ್ಯಾಟ್ ಹಿಡಿದು ಮೈದಾನದಲ್ಲಿ ಕ್ರಿಕೆಟ್ ಆಡುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಈ ಜಿಲ್ಲೆಯಲ್ಲಿ ಸುಮಾರು 7 ದಶಕಗಳ ನಂತರ ವಿದ್ಯುತ್ ಬೆಳಕನ್ನು ಈ ವರ್ಷವಷ್ಟೇ ಕಂಡಿತ್ತು. ಈ ಮೂಲಕ ಅಲ್ಲಿನ ಜನರು ಹಿಂಸಾಚಾರವನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಸೇರುವ ಮೂಲಕ ರಚನಾತ್ಮಕ ಕೆಲಸವನ್ನು ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಭಯೋತ್ಪಾದನೆಯ ಕೇಂದ್ರವಾಗಿದ್ದ ಹಫ್ರುಡಾ ನಿಧಾನವಾಗಿ ಶಾಂತಿಯುವ ಸ್ಥಳವಾಗಿ ಮಾರ್ಪಡುತ್ತಿದೆ. ಆ ಜಾಗದಲ್ಲಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಟೂರ್ನಮೆಂಟ್ ನಡೆದಿದ್ದು, ಯುವ ಆಟಗಾರರನ್ನು ಹುರಿದುಂಬಿಸಲು ನೂರಾರು ಯುವಕರು ಆಗಮಿಸುತ್ತಿದ್ದಾರೆ. ಈ ಟೂರ್ನಿಗೆ ಅದ್ಭುತ ಪ್ರತಿಕ್ರಿಯೆ ಬಂದಿರುವುದರಿಂದ ಆಯೋಜಕರಿಗೆ ಸಂತೋಷ ತಂದಿದೆ.
1990ರ ದಶಕದಲ್ಲಿ ಭಯೋತ್ಪಾದನೆ ಮತ್ತು ಉಗ್ರ ಚಟುವಟಿಕೆಯ ಕೇಂದ್ರವೆಂಬ ಕುಖ್ಯಾತಿಗೆ ಹಫ್ರುದಾ ಪಾತ್ರವಾಗಿತ್ತು. ಅಲ್ಲಿನ ಸುಮಾರು 50 ಕಿ.ಮೀ ಅರಣ್ಯ ಪ್ರದೇಶದಲ್ಲಿ ದಶಕದಿಂದ ಸುಮಾರು 1000ಕ್ಕೂ ಹೆಚ್ಚು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಕೊಲ್ಲುವುದನ್ನು ಇಲ್ಲಿನ ಜನರು ಕಂಡಿದ್ದರು.
ಆದರೆ, ಇಲ್ಲಿನ ಪರಿಸ್ಥಿತಿ ಬದಲಾಗುತ್ತಿದೆ. ರಕ್ತಪಾತಕ್ಕೆ ಹೆಸರಾಗಿದ್ದ ಹಫ್ರುದಾದಲ್ಲಿ 18 ರಿಂದ 27 ವರ್ಷದ 300ಕ್ಕೂ ಹೆಚ್ಚು ಯುವಕರು 24 ತಂಡಗಳನ್ನು ರಚಿಸಿಕೊಂಡು ಅಕ್ಟೋಬರ್ 15ರಿಂದ 31ರವರೆಗೆ ನಡೆದಿದ್ದ ಕ್ರಿಕೆಟ್ ಲೀಗ್ನಲ್ಲಿ ಸ್ಪರ್ಧಿಸಿದ್ದು, ಟೂರ್ನಿಯನ್ನ ಯಶಸ್ವಿಯಾಗಿ ಮುಗಿಸಿದ್ದಾರೆ.

ವಿಶೇಷವೆಂದರೆ ಈ ಟೂರ್ನಿಯಲ್ಲಿ ಭಾಗವಹಿಸಿದ್ದ ಎಲ್ಲಾ ಯುವಕರು ಪರ್ವತ ಪ್ರದೇಶಗಳಿಂದ ಬಂದವರು. ಕೋವಿಡ್ 19 ಮುನ್ನೆಚ್ಚೆರಿಕೆಯ ನಡುವೆ ಇಂದು(ಶನಿವಾರ) ನಡೆದ ಕಾಕ್ರೋಸ ಯುನೈಟೆಡ್ ಮತ್ತು ಯುನೈಟೆಡ್ ಮಲಿಕ್ಪೋರಾ ನಡುವಿನ ಫೈನಲ್ ಪಂದ್ಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾದರು.
ಈ ಪಂದ್ಯದ ನಂತರ ಅಲ್ಲಿ ನೆರೆದಿದ್ದ ಯುವಕರ ರಕ್ತದಾನ ಮಾಡುವ ಮೂಲಕ ರಾಷ್ಟ್ರಕ್ಕಾಗಿ ತಮ್ಮ ರಕ್ತವನ್ನು ಚೆಲ್ಲುವ ಪ್ರತಿಜ್ಞೆ ಮಾಡಿದರು.15ನೇ ರಾಷ್ಟ್ರೀಯ ರೈಫಲ್ಸ್ ಪ್ರದೇಶ ಘಟಕದ ಬೆಂಬಲದೊಂದಿಗೆ ಸ್ಥಳೀಯ ಜನರು ಈ ಲೀಗ್ ಆಯೋಜಿಸಿದ್ದರು. ಟೂರ್ನಿಯ ಲೀಗ್ ಪಂದ್ಯಗಳು ಬೇನಿಪೋರಾ, ವಿಲ್ಲಮ್ ಮತ್ತು ಹಫ್ರುಡಾದಲ್ಲಿ ನಡೆದಿದ್ದವು.
ಈ ಕ್ರಿಕೆಟ್ ಲೀಗ್ನ ಯಶಸ್ಸು ಕಾಶ್ಮೀರಿ ಯುವಕರ ಉಜ್ವಲ ಭವಿಷ್ಯವನ್ನು ರೂಪಿಸುವ ದೃಢ ನಿರ್ಧಾರವನ್ನು ನೆನಪಿಸುತ್ತದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೊತೆಗೆ ಕುಪ್ವಾರಾದ ಯುವಕರು ಕ್ರಿಕೆಟ್ ಬ್ಯಾಟ್ ಎತ್ತಿಕೊಂಡಿರುವುದರಿಂದ ಉಳಿದ ಕಾಶ್ಮೀರಿಗಳು ಅವರನ್ನು ಅನುಸರಿಸಲು ದಾರಿ ತೋರಿಸಿದ್ದಾರೆ.
ಅಲ್ಲದೆ ಇಂತಹ ಲೀಗ್ಗಳಿಂದ ಹಫ್ರುದಾದ ರಾಮ್ಹಾಲ್, ಟ್ರೆಹಗಮ್ ಮತ್ತು ಟ್ರಾಲ್ಪೊರಾ ಬ್ಲಾಕ್ಗಳನ ಕಣಿವೆಗಳಲ್ಲಿ ಶಾಂತಿ ನೆಲೆಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.