ಮುಂಬೈ: ಐಪಿಎಲ್ನಲ್ಲಿ ಚೀನಾದ ವಿವೋ ಕಂಪನಿಯ ಪ್ರಾಯೋಜಕತ್ವ ಮುಂದುವರಿಸಿರುವುದಕ್ಕೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಬಿಸಿಸಿಐ ವಿರುದ್ಧ ಕೆಂಡಕಾರಿದೆ.
ಸೆಪ್ಟೆಂಬರ್ 19ರಿಂದ ನವೆಂಬರ್ 10 ರವರೆಗೆ ಯುಎಇಯಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಆಯೋಜಿಸಲು ಬಿಸಿಸಿಐಗೆ ಅನುಮತಿ ನೀಡಬಾರದು ಎಂದು ವಾಣಿಜ್ಯ ಸಂಸ್ಥೆ ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದೆ.
ಲಡಾಕ್ನಲ್ಲಿ ಚೀನಾ ಸೈನಿಕರ ಜೊತೆ ನಡೆದ ಕಾದಾಟದಲ್ಲಿ ಭಾರತೀಯ ಸೈನಿಕರು ಪ್ರಾಣತ್ಯಾಗ ಮಾಡಿದ ನಂತರ ದೇಶದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಲಾಗುತ್ತಿದೆ. ಇನ್ನು ಸ್ವತಃ ಭಾರತ ಸರ್ಕಾರ ಚೀನಾದ ಮೊಬೈಲ್ ಆ್ಯಪ್ಗಳನ್ನು ನಿಷೇಧಿಸಿದೆ. ಹೀಗಿರುವಾಗ ಬಿಸಿಸಿಐ ತನ್ನ ಟಿ-20 ಲೀಗ್ನ ಪ್ರಾಯೋಜಕತ್ವವನ್ನು ಚೀನಾ ಮೂಲಕ ವಿವೋ ಕಂಪನಿಯೊಂದಿಗೆ ಮುಂದುವರಿಸುತ್ತಿರುವುದಕ್ಕೆ ಸಿಎಐಟಿ ವಿರೋಧ ವ್ಯಕ್ತಪಡಿಸಿದೆ.
"ದುಬೈನಲ್ಲಿ ನಡೆಯಲಿರುವ ಐಪಿಎಲ್‌ಗೆ ಶೀರ್ಷಿಕೆ ಪ್ರಾಯೋಜಕರಾಗಿ ಚೀನಾದ ಕಂಪನಿ ವಿಮೋವನ್ನು ಉಳಿಸಿಕೊಳ್ಳಲು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಇತ್ತೀಚಿಗೆ ನಿರ್ಧಾರ ತೆಗೆದುಕೊಂಡಿರುವುದನ್ನು ನಿಮ್ಮ ಗಮನಕ್ಕೆ ತರಲು ನಾವು ಬಯಸಿದ್ದೇವೆ" ಎಂದು ಸಿಎಐಟಿ ರಾಷ್ಟ್ರೀಯ ಜನರಲ್ ಪ್ರವೀಣ್ ಖಂಡೇಲ್ವಾಲ್ ಪತ್ರದಲ್ಲಿ ತಿಳಿಸಿದ್ದಾರೆ
ಕಳೆದ ತಿಂಗಳು ಗಡಿಯಲ್ಲಿ ಚೀನಾದ ಆಕ್ರಮಣದ ನಂತರ ಭಾರತೀಯರು ಚೀನಾ ವಿರುದ್ದ ಭಾವಾನಾತ್ಮಕವಾಗಿ ಕೆರಳಿಸಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಆತ್ಮ ನಿರ್ಭರ್ ಭಾರತ ಹಾಗೂ ವೋಕಲ್ ಫಾರ್ ಲೋಕಲ್ ನೀತಿಗೆ ವಿರುದ್ಧವಾಗಿ ಬಿಸಿಸಿಐ ನಡೆದುಕೊಳ್ಳುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬಿಸಿಸಿಐ ನಿರ್ಧಾರ ಜನರ ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಕೇವಲ ಹಣದ ದಾಹ ತೀರಿಸಿಕೊಳ್ಳಲು ಚೀನಾದ ಕಂಪನಿಗಳ ಜೊತೆ ವ್ಯವಹಾರ ನಡೆಸಿದೆ ಎಂದು ಸಿಎಐಟಿ ಆಕ್ರೋಶ ಹೊರ ಹಾಕಿದೆ.
ಬಿಸಿಸಿಐ ಐಪಿಎಲ್ ಟೈಟಲ್ ಸ್ಪಾನ್ಸರ್ಶಿಪ್ನಿಂದ ವಿವೋ ಕಂಪನಿಯಿಂದ ವರ್ಷಕ್ಕೆ 440 ಕೋಟಿ ರೂ ಪಡೆಯುತ್ತಿದೆ. ವಿವೋ ಜೊತೆಗಿನ ಒಪ್ಪಂದ 2022ಕ್ಕೆ ಕೊನೆಗೊಳ್ಳಲಿದೆ. ತಕ್ಷಣ ಹೊಸ ಪ್ರಾಯೋಜಕರನ್ನು ಹುಡುಕುವುದು ಕಷ್ಟವಾಗಿರುವುದರಿಂದ ನಾವು ಈ ಬಾರಿ ವಿವೋದೊಂದಿಗೆ ಮುಂದುವರಿಯುತ್ತಿದ್ದೇವೆ ಎಂದು ಬಿಸಿಸಿಐ ಭಾನುವಾರ ತಿಳಿಸಿತ್ತು.