ಮೆಲಬೋರ್ನ್: ಕಳೆದ ವಾರ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ 26 ಆಟಗಾರರ ಪ್ರಾಥಮಿಕ ತಂಡವನ್ನು ಘೋಷಣೆ ಮಾಡಿದ್ದು, ಅದರಲ್ಲಿ ತಮ್ಮನ್ನು ಕೈಬಿಟ್ಟಿರುವುದಕ್ಕೆ ಪೀಟರ್ ಹ್ಯಾಂಡ್ಸ್ಕೊಂಬ್ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ 26 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ನೋಡಿದ ಪೀಟರ್ ಹ್ಯಾಂಡ್ಸ್ಕೊಂಬ್ ಆಶ್ಚರ್ಯಗೊಂಡಿದ್ದಾರೆ.
"ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರಕಟಿಸಿರುವ 26 ಸದಸ್ಯರ ತಂಡದ ಹೆಸರನ್ನು ನಾನು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ನೋಡಿದೆ. ಆ ಲಿಸ್ಟ್ನಲ್ಲಿ ನಾನಿಲ್ಲ ಎಂದು ಊಹಿಸಿದೆ "ಎಂದು ಅವರು ತಿಳಿಸಿದ್ದಾರೆ.
"ಭಾರತದ ವಿರುದ್ಧ ಈ ವರ್ಷಾರಂಭದಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ನಾನು 15 ಸದಸ್ಯರ ತಂಡದಲ್ಲಿದ್ದೆ. ನಾನು ಕಳೆದ ಒಂದುವರೆ ವರ್ಷದಲ್ಲಿ ನೀಡಿರುವ ಪ್ರದರ್ಶನವನ್ನು ಪರಿಗಣನೆಗೆ ತೆಗೆದುಕೊಂಡರೆ ನಾನೀಗಲು ಟಾಪ್ 20ರಲ್ಲಿದ್ದೇನೆ. ಆದರೆ ನನ್ನನ್ನು 26 ಆಟಗಾರರ ಲಿಸ್ಟ್ನಿಂದ ಹೊರಗಿಟ್ಟಿರುವುದು ನೋವು ತಂದಿದೆ" ಎಂದು ಹ್ಯಾಂಡ್ಸ್ಕೊಂಬ್ ಬೇಸರ ವ್ಯಕ್ತಪಿಡಿಸಿದ್ದಾರೆ.
ಕಳೆದ ಸರಣಿಯಲ್ಲಿ ನಾನು ತಂಡದ ಭಾಗವಾಗಿದ್ದರೂ ಈ ಸರಣಿಗೆ ನನ್ನನ್ನು ಕಡೆಗಣಿಸಿ ಇಂಗ್ಲೆಂಡ್ ಪ್ರವಾಸಕ್ಕೆ 11 ಆಟಗಾರರಿಗೆ ಅವಕಾಶ ನೀಡಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ.
ಈ ವಿಚಾರವಾಗಿ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿಯೊಡನೆ ಮಾತನಾಡಲಿದ್ದೇನೆ. ಟಾಪ್ 15ರಲ್ಲಿದ್ದ ನನ್ನನ್ನು 26ರ ತಂಡದಿಂದ ಕೈಬಿಟ್ಟಿರುವುದಕ್ಕೆ ನನಗೆ ಕಾರಣ ಗೊತ್ತಾಗಬೇಕಿದೆ ಎಂದು ಹ್ಯಾಂಡ್ಸ್ಕೊಂಬ್ ಹೇಳಿದ್ದಾರೆ.