ಪೌರಿ ಗರ್ವಾಲ್: ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲಾ ನ್ಯಾಯಾಲಯದ ಆವರಣದ ಬಳಿ ಮರಿಯೊಂದಿಗೆ ದೊಡ್ಡ ಚಿರತೆಯೊಂದು ಕಾಣಿಸಿಕೊಂಡಿರುವುದು ಸಂಚಲನ ಮೂಡಿಸಿದೆ. ಆವರಣದಲ್ಲಿ ಚಿರತೆ ಓಡಾಡುತ್ತಿರುವುದನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಕೋರ್ಟ್ ಆವರಣ, ಸರ್ಕ್ಯೂಟ್ ಹೌಸ್ ಹಾಗೂ ಇತರ ವಸತಿ ಬಡಾವಣೆಗಳ ಬಳಿ ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಅರಣ್ಯ ಇಲಾಖೆಗೆ ಲಿಖಿತ ಹಾಗೂ ಮೌಖಿಕವಾಗಿ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಇದರಿಂದಾಗಿ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪೌರಿ ಗರ್ವಾಲ್ ಅರಣ್ಯ ವಿಭಾಗದ ನಾಗದೇವ್ ರೇಂಜ್ ಫಾರೆಸ್ಟ್ ಆಫೀಸರ್ ದಿನೇಶ್ ಚಂದ್ರ ನೌಟಿಯಾಲ್ ಮಾತನಾಡಿ, "ಕೋರ್ಟ್ ಆವರಣದಲ್ಲಿ ಚಿರತೆ ಚಲನವಲನದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಅರಣ್ಯ ಇಲಾಖೆ ನಿರಂತರವಾಗಿ ಗಸ್ತು ತಿರುಗುತ್ತಿದ್ದು, ಇದನ್ನು ಹೆಚ್ಚಿಸಲಾಗುವುದು. ಅಗತ್ಯವಿದ್ದರೆ, ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಲಾದ ಸ್ಥಳದಲ್ಲಿ ಬೋನ್ಗಳನ್ನು ಸಹ ಇರಿಸಲಾಗುವುದು" ಎಂದು ತಿಳಿಸಿದರು.
ಈಟಿವಿ ಭಾರತ ಜೊತೆಗೆ ಮಾತನಾಡಿದ ಡಿಎಫ್ಒ ಅನಿರುದ್ಧ ಸ್ವಪ್ನಿಲ್, "ಚಿರತೆ ಕಾಣಿಸಿಕೊಂಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಗಸ್ತು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಗತ್ಯವಿದ್ದರೆ, ಆ ಪ್ರದೇಶದಲ್ಲಿ ಬೋನ್ ಇಡಲಾಗುವುದು. ನಾಗದೇವ್ ವ್ಯಾಪ್ತಿ ಈಗಾಗಲೇ ಚಿರತೆ ಪೀಡಿತ ಪ್ರದೇಶವಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳಿವೆ. ಅವುಗಳು ಕೆಲವೊಮ್ಮೆ ವಸತಿ ಪ್ರದೇಶಗಳ ಕಡೆಗೂ ಬರುತ್ತವೆ" ಎಂದರು.
ಕೆಲವು ದಿನಗಳ ಹಿಂದೆ ಚಾಕಿಸೈನ್ ತಹಸಿಲ್ನ ಮರ್ಖೋಲಾ ಗ್ರಾಮದಲ್ಲಿ ಹುಲ್ಲು ತರಲೆಂದು ಹೋಗಿದ್ದ ವೃದ್ಧೆಯೊಬ್ಬಳ ಮೇಲೆ ಚಿರತೆ ದಾಳಿ ಮಾಡಿತ್ತು. ದಾಳಿಯಲ್ಲಿ ಮಹಿಳೆಯ ಕೆನ್ನೆ, ಕೈ ಮತ್ತು ಭುಜಕ್ಕೆ ಗಾಯಗಳಾಗಿತ್ತು.
ಇದನ್ನೂ ಓದಿ: ಚಿರತೆ ದಾಳಿಗೆ ಅರ್ಚಕ ಬಲಿ; 10 ದಿನದಲ್ಲಿ ಆರನೇ ಸಾವು - PANTHER ATTACK