ಛತ್ತೀಸ್‌ಗಢ: ಇಲ್ಲಿನ ಬಸ್ತಾರ್ ವಿಭಾಗದ ಬಿಜಾಪುರದಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ 31 ನಕ್ಸಲರು ಹತರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಕೂಡಾ ಹುತಾತ್ಮರಾಗಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.
ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಅರಣ್ಯದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಬೆಳಗ್ಗೆ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಕ್ಸಲರು ಇರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಇದರ ಆಧಾರದ ಮೇಲೆ ಡಿಆರ್‌ಜಿ ಹಾಗೂ ಎಸ್‌ಟಿಎಫ್ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಗುಂಡಿನ ಚಕಮಕಿ ನಡೆಯಿತು ಎಂದು ಅವರು ತಿಳಿಸಿದರು.
"ಪ್ರಾಥಮಿಕ ಮಾಹಿತಿ ಪ್ರಕಾರ, ಸಾವನ್ನಪ್ಪಿರುವ 31 ಮಂದಿಯಲ್ಲಿ ಪ್ರಮುಖ ನಕ್ಸಲರಿದ್ದರು. ಸದ್ಯ ಭದ್ರತಾ ಪಡೆಗಳು ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ಈ ಪ್ರದೇಶದಲ್ಲಿ ಶೋಧ ನಡೆಯುತ್ತಿದೆ" ಎಂದು ಹೇಳಿದರು.
ಫೆ.1ರವರೆಗೆ 50 ನಕ್ಸಲರ ಹತ್ಯೆ: ಇದೇ ಫೆಬ್ರವರಿ 1ರಂದು ಬಿಜಾಪುರದದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಎನ್‌ಕೌಂಟರ್ ನಡೆದಿತ್ತು. ಎಂಟು ನಕ್ಸಲೀಯರು ಹತರಾಗಿದ್ದರು. ಈ ಬಗ್ಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಬಸ್ತಾರ್ ಐಜಿ ಸುಂದರರಾಜ್ ಪಿ ಅವರು, "ಫೆಬ್ರವರಿ 1, 2025ರವರೆಗೆ ರಾಜ್ಯದಲ್ಲಿ ನಡೆದ ವಿವಿಧ ಎನ್‌ಕೌಂಟರ್‌ಗಳಲ್ಲಿ 50 ನಕ್ಸಲೀಯರು ಹತರಾಗಿದ್ದಾರೆ" ಎಂದು ತಿಳಿಸಿದ್ದರು.
ಇದನ್ನೂ ಓದಿ: ಬಿಜಾಪುರ ಎನ್‌ಕೌಂಟರ್: ಎಂಟು ಮಂದಿ ನಕ್ಸಲರು ಹತ, ಶಸ್ತ್ರಾಸ್ತ್ರಗಳು ವಶಕ್ಕೆ
ಇದನ್ನೂ ಓದಿ: ಉಡುಪಿ ಜಿಲ್ಲಾಧಿಕಾರಿ ಎದುರು ಶರಣಾದ ನಕ್ಸಲ್ ತೊಂಬಟ್ಟು ಲಕ್ಷ್ಮಿ