ಹೈದರಾಬಾದ್: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಇಂದು ಕೆರಿಬಿಯನ್ನರ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವೆಲ್ನಲ್ಲಿ ಆಡಲಿದೆ. ಉಭಯ ತಂಡಗಳ ನಡುವಣ 100ನೇ ಟೆಸ್ಟ್ ಪಂದ್ಯ ಇದಾಗಿದ್ದು ಸಾಕಷ್ಟು ಮಹತ್ವ ಪಡೆದಿದೆ.
1948ರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಈ ಸರಣಿಯ ಮೊದಲ ಪಂದ್ಯ ಡ್ರಾ ಮೂಲಕ ಅಂತ್ಯಗೊಂಡರೆ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿತ್ತು.
ಅಂದಿನಿಂದ ಆರಂಭವಾದ ಭಾರತ-ವಿಂಡೀಸ್ ನಡುವಿನ ಟೆಸ್ಟ್ ಪಂದ್ಯಗಳು ಇದೀಗ 99ರ ಗಡಿ ತಲುಪಿದ್ದು ಇಂದು ಶತಕ ಪೂರೈಸುತ್ತಿದೆ. ಆರಂಭದಲ್ಲಿ ವಿಂಡೀಸ್ ತಂಡ ಮೊದಲೆರಡು ದಶಕಗಳವರೆಗೆ ಭಾರತದ ವಿರುದ್ಧ ಹಲವು ಟೆಸ್ಟ್ ಸರಣಿಗಳನ್ನು ಗೆದ್ದು ಬಲಿಷ್ಠ ತಂಡವಾಗಿ ಹೊರಹೊಮ್ಮಿತ್ತು.
ಹೆಡ್-ಟು-ಹೆಡ್ ದಾಖಲೆಗಳ ಪ್ರಕಾರ, ಭಾರತಕ್ಕಿಂತ ಹೆಚ್ಚಿನ ಗೆಲುವುಗಳು ಕೆರೆಬಿಯನ್ನರ ಖಾತೆಯಲ್ಲಿವೆ. ಈವರೆಗೂ ಎರಡು ತಂಡಗಳು ಆಡಿರುವ 99 ಟೆಸ್ಟ್‌ಗಳ ಪೈಕಿ ಭಾರತ 23ರಲ್ಲಿ ಗೆಲುವು ಸಾಧಿಸಿದರೆ, ವೆಸ್ಟ್ ಇಂಡೀಸ್ 30ರಲ್ಲಿ ಗೆದ್ದು ಮುಂಚೂಣಿಯಲ್ಲಿದೆ. 46 ಪಂದ್ಯಗಳು ಡ್ರಾನಲ್ಲಿ ಮುಕ್ತಾಯ ಕಂಡಿವೆ.
ಒಂದಾನೊಂದು ಕಾಲದಲ್ಲಿ ಪ್ರಬಲ ತಂಡವೆನಿಸಿಕೊಂಡಿದ್ದ ವೆಸ್ಟ್ ಇಂಡೀಸ್ ಪ್ರಸ್ತುತ ಕಳಪೆ ಪ್ರದರ್ಶನದಿಂದಾಗಿ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದೆ. ಎರಡು ದಶಕಗಳಿಂದ ವೆಸ್ಟ್ ಇಂಡೀಸ್ ವಿರುದ್ಧ ಗೆಲುವಿನ ಓಟ ಮುಂದುವರೆಸಿರುವ ಭಾರತ ಕಳೆದ 21 ವರ್ಷಗಳಲ್ಲಿ ಸತತ 8 ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿದೆ. ವೆಸ್ಟ್ ಇಂಡೀಸ್ 2002ರಲ್ಲಿ ಕೊನೆಯ ಬಾರಿಗೆ ಭಾರತ ವಿರುದ್ಧ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿತ್ತು.
ನೂರನೇ ಟೆಸ್ಟ್ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿ, "ಇದೊಂದು ವಿಶೇಷ ಸಂದರ್ಭ. ನಮ್ಮ ನಡುವೆ 100ನೇ ಟೆಸ್ಟ್ ನಡೆಯಲಿದೆ. ಎರಡು ಕ್ರಿಕೆಟ್ ತಂಡಗಳಿಗೆ ಸುದೀರ್ಘ ಇತಿಹಾಸವಿದೆ. ಆಗ ನಾನಿನ್ನೂ ಹುಟ್ಟಿರಲಿಲ್ಲ. ಅಂದಿನಿಂದ ಇಂದಿನವರೆಗೂ ಉಭಯ ತಂಡಗಳ ನಡುವೆ ಟೆಸ್ಟ್ ನಡೆದುಕೊಂಡು ಬಂದಿದೆ. ಎರಡೂ ತಂಡಗಳು ಉತ್ತಮ ಕ್ರಿಕೆಟ್ನೊಂದಿಗೆ ಜನರನ್ನು ರಂಜಿಸುತ್ತಿವೆ. ಈ ಟೆಸ್ಟ್ ಪಂದ್ಯವೂ ಹಾಗೆಯೇ ಇರಬೇಕೆಂದು ನಾನು ನಿರೀಕ್ಷಿಸುತ್ತೇನೆ. ಕಳೆದ ಪಂದ್ಯದಲ್ಲಿ ತೋರಿದ ಪ್ರದರ್ಶನವನ್ನೇ ಮುಂದುವರೆಸಲು ನಾವು ಬಯಸುತ್ತೇವೆ" ಎಂದರು.
ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಸಹಿತ 141 ರನ್‌ಗಳ ಜಯ ಸಾಧಿಸಿ 1-0 ಅಂತರದಿಂದ ಮುನ್ನಡೆಯಲ್ಲಿದೆ. ಭಾರತ 2ನೇ ಟೆಸ್ಟ್ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಇನ್ನೊಂದೆಡೆ, ವಿಂಡೀಸ್ ಸರಣಿ ಸಮಬಲ ಸಾಧಿಸುವ ಯೋಜನೆ ಹಾಕಿಕೊಂಡಿದೆ.
ಭಾರತ ವಿವಿಧ ತಂಡಗಳ ವಿರುದ್ಧ ಆಡಿರುವ ಟೆಸ್ಟ್ ಪಂದ್ಯಗಳ ಮಾಹಿತಿ:
- ಇಂಗ್ಲೆಂಡ್ - 131 ಟೆಸ್ಟ್‌ಗಳು
- ಆಸ್ಟ್ರೇಲಿಯಾ - 107 ಟೆಸ್ಟ್‌ಗಳು
- ವೆಸ್ಟ್ ಇಂಡೀಸ್ - 99 ಟೆಸ್ಟ್‌ಗಳು
- ನ್ಯೂಜಿಲೆಂಡ್ - 62 ಟೆಸ್ಟ್‌ಗಳು
- ಪಾಕಿಸ್ತಾನ - 59 ಟೆಸ್ಟ್‌ಗಳು
- ಶ್ರೀಲಂಕಾ - 46 ಟೆಸ್ಟ್‌ಗಳು
- ದಕ್ಷಿಣ ಆಫ್ರಿಕಾ - 42 ಟೆಸ್ಟ್‌ಗಳು
ಇದನ್ನೂ ಓದಿ: IND vs WI 2nd Test: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಭರವಸೆ ಹೆಚ್ಚಿಸಿದ ಭಾರತದ ಟಾಪ್ 5 ಆಟಗಾರರು