ಟಿ.ಎನ್. ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ಐಪಿಎಸ್ ಅಧಿಕಾರಿ ಮೈತ್ರಿ ಮಹಾನಂದ್ ಆಗಿ ಅಭಿನಯಿಸುತ್ತಿರುವ ನಟಿಯ ಹೆಸರು ಹರ್ಷಿತಾ. ಸಕ್ಕರೆ ನಾಡಿನ ಈ ಸುಂದರಿ ಹುಟ್ಟಿ ಬೆಳೆದಿದ್ದು ಜೊತೆಗೆ ಬದುಕು ಕಟ್ಟಿಕೊಂಡಿದ್ದು ಕೂಡಾ ಮಹಾನಗರಿ ಬೆಂಗಳೂರಿನಲ್ಲಿ.
ಹರ್ಷಿತಾಗೆ ಇದು ಮೊದಲ ಧಾರಾವಾಹಿಯಲ್ಲ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅರಸಿ' ಧಾರಾವಾಹಿಯಲ್ಲಿ ರಚಿತಾ ರಾಮ್ ಜೊತೆಗೆ ಸೂಜಿ ಪಾತ್ರದಲ್ಲಿ ನಟಿಸಿದ್ದ ಹರ್ಷಿತಾ ನಂತರ 'ಶ್ರೀ ಗುರು ರಾಘವೇಂದ್ರ ವೈಭವ' ಧಾರಾವಾಹಿಯ ಎಪಿಸೋಡ್ ಒಂದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಎಂ.ಎಸ್. ಜಯಂತ್ ನಿರ್ದೇಶನದ 'ದಿಲ್ ಖುಷ್' ಎಂಬ ಟೆಲಿಫಿಲಂನಲ್ಲಿ ಅಭಿನಯಿಸಿದ್ದ ಈಕೆ ಮತ್ತೆ ಕಿರುತೆರೆಗೆ ಮರಳಿ ಬಂದ್ದದ್ದು 'ಮಗಳು ಜಾನಕಿ'ಯ ಮೈತ್ರಿ ಮಹಾನಂದ್ ಆಗಿ. ಮೈತ್ರಿ ಪಾತ್ರ ನನ್ನ ನಿಜ ಜೀವನದ ಮೇಲೆ ಒಂದಷ್ಟು ಪ್ರಭಾವ ಬೀರಿದೆ ಎಂದರೆ ಸುಳ್ಳಲ್ಲ. ನಾನು ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದಕ್ಕೆ ನಿಜಕ್ಕೂ ಸಂತೋಷವಾಗುತ್ತಿದೆ. ಟಿ.ಎನ್. ಸೀತಾರಾಮ್ ಅವರ ಧಾರಾವಾಹಿಯ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತದೆ. ಮತ್ತು ಅದೇ ರೀತಿ ಕಥೆ ಬರೆಯುತ್ತಾರೆ ಎಂದು ಹೇಳುತ್ತಾರೆ ಹರ್ಷಿತಾ.
ಬಾಲನಟರಿಗೆ ಕಂಠದಾನ ಮಾಡಿರುವ ಇವರು 'ಈ ಬಂಧನ' ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ ಸೇರಿದಂತೆ ಕೆಲವೊಂದು ನಟಿಯರ ಸಿನಿಮಾಗಳಿಗೆ ಧ್ವನಿ ನೀಡಿದ್ದಾರೆ. ಹರ್ಷಿತಾ, ನಟಿ ಮಾತ್ರವಲ್ಲ, ಭರತನಾಟ್ಯ ಕಲಾವಿದೆ ಕೂಡಾ ಹೌದು. ವಿದುಷಿ ಶ್ರೀಮತಿ ಮಂಜುಳಾ ಪರಮೇಶ್ವರ್ ಅವರ ನೃತ್ಯ ಗರಡಿಯಲ್ಲಿ ಪಳಗಿದ ಈಕೆ ಸುಮಾರು 15 ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ವಿದ್ವತ್ ಪದವಿಯನ್ನು ಪಡೆದಿರುವ ಹರ್ಷಿತಾ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದರು. ನಾಡಹಬ್ಬ ಮೈಸೂರು ದಸರಾ ಸೇರಿದಂತೆ 150 ಕ್ಕೂ ಹೆಚ್ಚು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ಮಾಡಿರುವ ಹರ್ಷಿತಾ ಚಂದ್ರಾ ಲೇ ಔಟ್ ನಲ್ಲಿರುವ ಸಿದ್ದಗಂಗಾ ಸ್ಕೂಲ್ನಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದಾರೆ. ಹರ್ಷಿತಾ ಬಣ್ಣದ ಲೋಕಕ್ಕೆ ಬರಲು ಅಮ್ಮನೇ ಸ್ಪೂರ್ತಿಯಂತೆ.