'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯ ತಂಗಿ ಅದಿತಿಯಾಗಿ ನಟಿಸುತ್ತಿರುವ ದಾವಣಗೆರೆ ಬೆಡಗಿ ಹೆಸರು ಪ್ರಿಯಾ ಆಚಾರ್. ಮೊದಲ ಧಾರಾವಾಹಿಯಲ್ಲೇ ಕಿರುತೆರೆಪ್ರಿಯರ ಮನ ಸೆಳೆದಿರುವ ಪ್ರಿಯಾ ಆಚಾರ್ ಇನ್ನೂ ಕಾಲೇಜು ವಿದ್ಯಾರ್ಥಿನಿ.
ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಆಗಿರುವ ಪ್ರಿಯಾ ನಟನೆ ಕಲಿತವರಲ್ಲ. ಬಾಲ್ಯದಿಂದಲೂ ಆ್ಯಕ್ಟಿಂಗ್ ಬಗ್ಗೆ ಆಸಕ್ತಿ ಹೊಂದಿದ್ದ ಪ್ರಿಯಾ ಆಗಾಗ ಟಿಕ್ಟಾಕ್ ವಿಡಿಯೋ ಮಾಡುತ್ತಿದ್ದರು. ಪ್ರಿಯಾ ಇಂದು ಅದಿತಿ ಆಗಿ ಮನೆ ಮಾತಾಗಿದ್ದಾರೆ ಅಂದರೆ ಅದಕ್ಕೆ ಟಿಕ್ ಟಾಕ್ ವಿಡಿಯೋನೇ ಮೂಲ ಕಾರಣ. ಪ್ರಿಯಾ ಅವರ ಟಿಕ್ ಟಾಕ್ ವಿಡಿಯೋ ನೋಡಿದ ಮಾಸ್ಟರ್ ಆನಂದ್ ಅವರಿಗೆ ನಟಿಸುವ ಅವಕಾಶ ನೀಡಿದರು.
ಅದಿತಿ ಆಗಿ ವೀಕ್ಷಕರ ಮನ ಕದ್ದಿರುವ ಪ್ರಿಯಾಗೆ ಗಟ್ಟಿಮೇಳ ಧಾರಾವಾಹಿಯ ಯಶಸ್ಸು ಬಹಳ ಖುಷಿ ತಂದಿದೆ. 'ಮೊದಲ ಪ್ರಾಜೆಕ್ಟ್ನಲ್ಲೇ ಜನರು ಇಷ್ಟಪಡುವ ಪಾತ್ರ ಪಡೆದಿರುವ ನನಗೆ ಬಣ್ಣದ ಲೋಕ ಬಹಳಷ್ಟು ಸಂತಸ ನೀಡಿದೆ. ಈಗಾಗಲೇ ಹಲವು ಧಾರಾವಾಹಿಗಳ ಜೊತೆಗೆ ಸಿನಿಮಾದಲ್ಲೂ ನಟಿಸುವಂತೆ ಅವಕಾಶಗಳು ಬರುತ್ತಿವೆ. ಆದರೆ ಗಟ್ಟಿಮೇಳ ಧಾರಾವಾಹಿಯ ಜೊತೆಗೆ ಓದನ್ನು ಬ್ಯಾಲೆನ್ಸ್ ಮಾಡುತ್ತಿದ್ದೇನೆ. ಉಳಿದ ಪ್ರಾಜೆಕ್ಟ್ಗಳ ಮೇಲೆ ಡಿಗ್ರಿ ಆದ ಬಳಿಕವಷ್ಟೇ ಗಮನ ಹರಿಸುತ್ತೇನೆ' ಎಂದು ಹೇಳುತ್ತಾರೆ ಪ್ರಿಯಾ ಆಚಾರ್.
ಧಾರಾವಾಹಿಯಲ್ಲಿ ಅರಳು ಹುರಿದಂತೆ ಮಾತನಾಡುವ ಪ್ರಿಯಾ ನಿಜ ಜೀವನದಲ್ಲಿ ಕೂಡಾ ಹೆಚ್ಚು ಮಾತನಾಡುವ ಹುಡುಗಿಯಂತೆ. ಧಾರಾವಾಹಿಯಲ್ಲಿ ಸದಾ ತಮ್ಮ ಇಬ್ಬರು ಅಕ್ಕ ಮತ್ತು ತಂಗಿಯೊಡನೆ ಆಗಾಗ ಜಗಳ ಮಾಡುತ್ತಿರುವ ಅದಿತಿಯಂತೆಯೇ ರಿಯಲ್ ಲೈಫ್ನಲ್ಲೂ ತಮ್ಮ ಮುದ್ದಿನ ತಂಗಿಯೊಡನೆ ಜಗಳವಾಡುತ್ತಾರಂತೆ ಪ್ರಿಯಾ.
ಧಾರಾವಾಹಿಯಲ್ಲಿ ಸದಾ ಕಾಲ ಸಾಂಪ್ರದಾಯಿಕ ಉಡುಗೆ ತೊಡುವ ನನಗೆ ಮಾಡ್ರನ್ ಡ್ರೆಸ್ ಧರಿಸುವುದು ತುಂಬಾ ಇಷ್ಟ. ಅಪರೂಪಕ್ಕೆ ಟ್ರೆಡಿಷನಲ್ ಡ್ರೆಸ್ ಕೂಡಾ ಧರಿಸುತ್ತೇನೆ ಎನ್ನುವ ಪ್ರಿಯಾ ಆಗ್ಗಾಗ್ಗೆ ಫೋಟೋಶೂಟ್ ಕೂಡಾ ಮಾಡಿಸುತ್ತಾರಂತೆ. ಗಟ್ಟಿಮೇಳ ಧಾರಾವಾಹಿ ಜೊತೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ನಲ್ಲಿ ನಟ ಅಭಿಷೇಕ್ ದಾಸ್ ಜೊತೆ ಹೆಜ್ಜೆ ಹಾಕಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾ ಅವರಿಗೆ ಬಹಳ ಅಭಿಮಾನಿಗಳಿದ್ದಾರೆ.