ಉದಯ ವಾಹಿನಿಯ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಾಗವೇಣಿಯಾಗಿ ನಟಿಸುತ್ತಿದ್ದ ಶಿಲ್ಪಾ ಅಯ್ಯರ್ ನಟನೆಗೆ ಬೈ ಹೇಳಿದ್ದು ಗೊತ್ತೇ ಇದೆ. ಆ ಜಾಗಕ್ಕೆ ಹೊಸ ಕಲಾವಿದೆಯ ಎಂಟ್ರಿ ಆಗಿದೆ. ಆಕೆ ಬೇರಾರೂ ಅಲ್ಲ, ವರ್ಷಿತಾ ಸೇನಿ.

ಚಿಕ್ಕವಳಿದ್ದಾಗಲೂ ತಾನೊಬ್ಬ ನಟನೆಯಾಗಬೇಕೆಂದು ಮಹಾದಾಸೆ ಹೊಂದಿದ್ದ ವರ್ಷಿತಾ ಕಾಲೇಜು ಓದುತ್ತಿರುವಾಗ ರಂಗ ಸೌರಭ ತಂಡ ಸೇರಿದರು. ರಾಜೇಂದ್ರ ಕಾರಂತರ ರಂಗ ಗರಡಿಯಲ್ಲಿ ಚೆನ್ನಾಗಿ ಪಳಗಿದ ವರ್ಷಿತಾ ಕಿರುತೆರೆಗೆ ಕಾಲಿಟ್ಟಿದ್ದು, ಮನೆದೇವರು ಧಾರಾವಾಹಿಯ ಮೂಲಕ. ಮನೆದೇವರು ಧಾರಾವಾಹಿಯಲ್ಲಿ ನಾಯಕಿ ಜಾನಕಿಯ ತಂಗಿಯಾಗಿ ನಟಿಸುತ್ತಿದ್ದ ವರ್ಷಿತಾ ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ದಾಮಿನಿಯ ಅಣ್ಣನ ಮಗಳಾಗಿ ಅಭಿನಯಿಸಿದರು. ತಿಂಡಿಪೋತಿ ಉಮಾ ಪಾತ್ರಕ್ಕೆ ಜೀವ ತುಂಬಿದ್ದ ವರ್ಷಿತಾ ವಿಭಿನ್ನ ಶೈಲಿಯ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.


ಮಾಸ್ಟರ್ ಆನಂದ್ ಅಭಿನಯದ ಹಗಲು- ಕನಸು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಈಕೆ ಈಗಾಗಲೇ ಕಿರುಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಚೆಕ್ ಎಂಬ ಕಿರುಚಿತ್ರದ ನಟನೆಗೆ ಸೈಮಾ ಶಾರ್ಟ್ ಫಿಲಂ ಅವಾರ್ಡ್ಸ್ ನಲ್ಲಿ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಕೂಡಾ ಈಕೆ ಪಡೆದಿರುತ್ತಾರೆ.
