ಮೈಸೂರು : ನೋವಿನ ಜೊತೆಗೆ ನಾವೆಲ್ಲ ಬದುಕಬೇಕಾಗಿದೆ. ಬದುಕಿ ಮುಂದೆ ಏನು ಮಾಡಬೇಕು ಎಂಬ ಯೋಚನೆ ಮಾಡುವ ಮೂಲಕ ಅಪ್ಪು ಕನಸನ್ನು ನನಸು ಮಾಡಲು ನಾವೆಲ್ಲಾ ಚಿಂತನೆ ನಡೆಸುತ್ತಿದ್ದೇವೆ ಎಂದು ನಟ ಶಿವರಾಜ್ ಕುಮಾರ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
Shivarajkumar Visit Shakti Dhama : ಅಪ್ಪು ನಿಧನದ ನಂತರ ಮೊದಲ ಬಾರಿಗೆ ಮೈಸೂರಿಗೆ ದಂಪತಿ ಸಮೇತ ಆಗಮಿಸಿದ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ಶಕ್ತಿಧಾಮಕ್ಕೆ ಭೇಟಿ ನೀಡಿದರು. ಅಲ್ಲಿನ ಟ್ರಸ್ಟಿಗಳ ಜೊತೆ ಮಾತುಕತೆ ನಡೆಸಿದ ನಂತರ ಭಜರಂಗಿ-2 ಚಿತ್ರ ಪ್ರದರ್ಶನ ನಡೆಯುತ್ತಿರುವ ಚಿತ್ರಮಂದಿರಕ್ಕೆ ಆಗಮಿಸಿದರು.
ಶಿವಣ್ಣ ಸಿನಿಮಾ ಮಂದಿರದ ಮುಂದೆ ಹಾಕಲಾಗಿದ್ದ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸ್ವಲ್ಪ ಸಮಯ ಸಿನಿಮಾ ವೀಕ್ಷಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಇಂದು ಅಪ್ಪು ಕಣ್ಣನ್ನು ನೋಡಿದರೆ ಅವನು ಒಂದು ಕಡೆ ಇದ್ದಾನೆ ಎಂದು ಭಾವನೆ ಬೆಳೆಸಿಕೊಳ್ಳಬೇಕು.
ಇಡೀ ಕರ್ನಾಟಕ ಜನತೆಯ ಸಪೋರ್ಟ್ ಇದೆ. ಜೊತೆಗೆ ಭಾರತೀಯ ಚಿತ್ರರಂಗದ ನೈತಿಕ ಬೆಂಬಲವೂ ಇದೆ. ನಾವೆಲ್ಲರೂ ಪುನೀತ್ ಕುಟುಂಬದ ಜೊತೆಗಿದ್ದೇವೆ. ಲಾಸ್ ಎಲ್ಲರಿಗೂ ಆಗಿದೆ. ಕ್ರಮೇಣ ಸರಿ ಹೋಗುವುದಿಲ್ಲ. ನೋವಿನ ಜೊತೆ ನಾವು ಬದುಕಬೇಕು. ಬದುಕಿ ಮುಂದೆ ನಾವು ಏನು ಮಾಡಬೇಕು ಎಂದು ಯೋಚನೆ ಮಾಡಿಕೊಂಡು ನಡೆಯಬೇಕು ಎಂದರು.
ಅಲ್ಲದೆ, ಪುನೀತ್ ನಡೆಸಿಕೊಂಡು ಬರುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವ ಬಗ್ಗೆ ಚಿಂತನೆ ನಡೆಯುತ್ತಿದೆ. ಅಪ್ಪ ಮತ್ತು ಅಮ್ಮ ಮಾಡಿರುವ ಶಕ್ತಿಧಾಮ ಸಂಸ್ಥೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕು. ಈಗ ಚೆನ್ನಾಗಿ ನಡೆಯುತ್ತಿದೆ. ಸಾಕಷ್ಟು ಜನ ಸಹಾಯಕ್ಕೆ ಬರುತ್ತಿದ್ದಾರೆ.
ಎಲ್ಲಿಯೂ ಮಿಸ್ ಯೂಸ್ ಆಗಬಾರದು. ಪಾರ್ವತಮ್ಮ ರಾಜ್‍ಕುಮಾರ್ ಹೋದ ಮೇಲೆ ಗೀತಾ ಅವರು ನೋಡಿಕೊಳ್ಳುತ್ತಿದ್ದಾರೆ. ಅದರ ಬಗ್ಗೆ ಕುಟುಂಬದ ಸದಸ್ಯರು ಸೇರಿ ತೀರ್ಮಾನ ಮಾಡುತ್ತೇವೆ. ನಮ್ಮ ಮತ್ತು ಅವರ ಮೇಲೆ ಜಾಸ್ತಿ ಜವಾಬ್ದಾರಿ ಇದೆ ಎಂದು ಶಕ್ತಿಧಾಮ ಮುಂದುವರೆಸುವ ಬಗ್ಗೆ ಹಾಗೂ ಅಪ್ಪು ಕನಸನ್ನು ನನಸು ಮಾಡುತ್ತೇವೆ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಪೈರಸಿ ನಿಯಂತ್ರಣ : ಪೈರಸಿ ನಿಯಂತ್ರಣಕ್ಕೆ ಸರ್ಕಾರ ಕೂಡ ಪ್ರಯತ್ನ ಮಾಡುತ್ತಿದೆ. ಹೊಡೆದು ಬಡಿದು ಕಂಟ್ರೋಲ್ ಮಾಡಿದರೆ ಪ್ರಯೋಜನ ಇಲ್ಲ. ಪೈರಸಿ ಮಾಡುವುದು ತಪ್ಪು ಎಂದು ಅವರಿಗೆ ತಿಳಿಯಬೇಕು ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.