ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ತಂದೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹರ್ಷಿಕಾ ತಂದೆ ಉದ್ದಪಂಡ ಪೂಣಚ್ಚ ಇಂದು ಬೆಳಗ್ಗೆ ಮಡಿಕೇರಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಹರ್ಷಿಕಾ ತಂದೆ-ತಾಯಿ ಜೊತೆ ಇರುವ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಇದೀಗ ಹರ್ಷಿಕಾ ಮನೆಯಲ್ಲಿ ಸೂತಕದ ವಾತಾವರಣ ಸೃಷ್ಠಿಯಾಗಿದೆ. ಉದ್ದಪಂಡ ಪೂಣಚ್ಚ ಸಣ್ಣ ಕರುಳಿನಲ್ಲಿ ರಂಧ್ರ ಇತ್ತು. ಇದರಿಂದ ಅವರಿಗೆ ಊಟ ಮಾಡಲು ಸಾಧ್ಯವಾಗದೆ ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವು ದಿನಗಳ ಹಿಂದೆ ಸರ್ಜರಿ ಕೂಡಾ ಆಗಿತ್ತು. ಇದರಿಂದ ಸುಧಾರಿಸಿಕೊಳ್ಳವ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ. ಪೂಣಚ್ಚ ಅವರಿಗೆ 68 ವರ್ಷ ವಯಸ್ಸಾಗಿತ್ತು. ಕೊಡಗಿನ ಅಮ್ಮೆತೋಡು ಗ್ರಾಮದಲ್ಲಿ ಪೂಣಚ್ಚ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.